ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯಕ್ಕೆ ವಿಧಾನ ಪರಿಷತ್ ಸ್ಥಾನ ನೀಡಿ: ಪೂಜಾರಿ ಆಗ್ರಹ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 9:
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಅಲ್ಪಸಂಖ್ಯಾತ ಸಮುದಾಯದ ಜನರು ಬೇಷರತ್ತಾಗಿ, ಇಡೀ ಒಂದು ವರ್ಗವಾಗಿ ಮತ ನೀಡಿರುವುದೇ ಮುಖ್ಯ ಕಾರಣ. ಇದರಿಂದಾಗಿ ರಾಜ್ಯದಲ್ಲಿ ಸ್ಪಷ್ಟ ಬಹುಮತದ ಕಾಂಗ್ರೆಸ್ ಸರ್ಕಾರ ರಚನೆಯಾಗಲು ಸಾಧ್ಯವಾಗಿದೆ. ಆದರೆ, ವಿಜಯಪುರ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಈ ಸಮುದಾಯವು ರಾಜಕೀಯ ಅಧಿಕಾರದ ಅಸ್ಪೃಶ್ಯತೆಯನ್ನು ಅನುಭವಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ವಿಧಾನಪರಿಷತ್ ಸ್ಥಾನಗಳ ಆಯ್ಕೆಯಲ್ಲಿ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ನಾಯಕರಿಗೆ ಸೂಕ್ತ ಪ್ರಾತಿನಿಧ್ಯ ಹಾಗೂ ಅವಕಾಶ ಮಾಡಿಕೊಡಬೇಕು ಎಂದು ನ್ಯಾಯವಾದಿ ಶ್ರೀನಾಥ ಪೂಜಾರಿ ಅವರು ಕಾಂಗ್ರೆಸ್ ಹೈಕಮಾಂಡ್ ಅನ್ನು ಆಗ್ರಹಿಸಿದರು.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ರಾಜ್ಯದಲ್ಲಿ ಬಹುಸಂಖ್ಯಾತರಾಗಿ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತಿರುವ ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಗಬೇಕು. ಅದರಲ್ಲೂ ವಿಶೇಷವಾಗಿ ಅವಿಭಜಿತ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ನಾಯಕರಿಗೆ ಈ ಬಾರಿ ಮನ್ನಣೆ ನೀಡಬೇಕು” ಎಂದು ಒತ್ತಾಯಿಸಿದರು.
“ಒಂದು ವೇಳೆ ಈ ಪ್ರಮುಖ ವರ್ಗಗಳ ಜನರು ಕಾಂಗ್ರೆಸ್ ಪಕ್ಷದ ಮೇಲೆ ಮುನಿಸಿಕೊಂಡರೆ, ಮುಂಬರುವ ದಿನಗಳಲ್ಲಿ ಪಕ್ಷವು ಬಹಳಷ್ಟು ರಾಜಕೀಯ ನಷ್ಟವನ್ನು ಅನುಭವಿಸಬೇಕಾಗುತ್ತದೆ” ಎಂದು ಅವರು ಇದೇ ವೇಳೆ ಎಚ್ಚರಿಸಿದರು.
ಸಮುದಾಯದ ನಾಯಕರಿಗೆ ಅವಕಾಶ ನೀಡಿ ವಿಜಯಪುರ ಜಿಲ್ಲೆಯಲ್ಲಿ ಪಕ್ಷಕ್ಕಾಗಿ ದುಡಿದಿರುವ ಅಲ್ಪಸಂಖ್ಯಾತ ಸಮುದಾಯದ ಹಿರಿಯ ನಾಯಕರಾದ ಅಬ್ದುಲ್ ಹಮೀದ್ ಮುಷ್ರೀಫ್, ಎಸ್. ಎಂ. ಪಾಟೀಲ (ಗಣಿಹಾರ), ಅಬ್ದುಲ್ ರಜಾಕ್ ಹೊರ್ತಿ, ಜಮೀರ ಭಕ್ಷಿ ಅಥವಾ ಮೊಹಮ್ಮದ್ ರಪೀಕ್ ಟಪಾಲ್ ಇವರಲ್ಲಿ ಯಾರಿಗಾದರೂ ಒಬ್ಬರಿಗೆ ವಿಧಾನಪರಿಷತ್ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ರಾಜಕೀಯದಲ್ಲಿ ಸಮುದಾಯದ ಪ್ರಾತಿನಿಧ್ಯವನ್ನು ಜೀವಂತವಾಗಿಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಲಿಂಗಾಯತ ಸಮುದಾಯದ ಮುಖಂಡರಾದ ಡಾ. ಬಸವರಾಜ ಬಿರಾದಾರ, ದಲಿತ ಮುಖಂಡರಾದ ಮಲ್ಲು ಜಾಲಗೇರಿ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಅಧ್ಯಕ್ಷ ಮಹಾದೇವ ಚಲವಾದಿ ಹಾಗೂ ಹುಚ್ಚಪ್ಪ ಭಾವಿಮನಿ ಉಪಸ್ಥಿತರಿದ್ದರು.

Share this