ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 10:
ಜಾಗತಿಕ ಮಟ್ಟದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಶಾಲೆಗಳಿಗೆ ಆನ್ಲೈನ್ ಶಿಕ್ಷಣದ ಮೂಲಕ ಪಾಠ ಬೋಧನೆ ನಡೆಸುವಂತೆ ಕೇಂದ್ರ ಸರ್ಕಾರ ಸೂಚಿಸಿರುವುದು ಗಮನಾರ್ಹ.
ಆದರೆ ದೇಶದ ಬಡ, ಶೋಷಿತ ಹಾಗೂ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸದೆ ಇಂತಹ ನಿರ್ಧಾರಗಳನ್ನು ಕೈಗೊಳ್ಳುವುದು ಶಿಕ್ಷಣದ ಹಕ್ಕಿನ ಮೇಲೆಯೇ ಪ್ರಶ್ನೆ ಹುಟ್ಟಿಸುವಂತಾಗಿದೆ. ಇದು ಹಾಸ್ಯಾಸ್ಪದವಾಗಿದೆ ಎಂದು ದ್ರಾವಿಡ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಅಕ್ಷಯಕುಮಾರ ಅಜಮನಿ ಟೀಕಿಸಿದ್ದಾರೆ.
ದೇಶದ ಅನೇಕ ನಗರಗಳ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳು, ಆದಿವಾಸಿ ಸಮುದಾಯದ ವಿದ್ಯಾರ್ಥಿಗಳು, ಬೀದಿ ಬದಿ ಹಾಗೂ ಮೂಲಭೂತ ಸೌಕರ್ಯಗಳೇ ಇಲ್ಲದ ಹಳ್ಳಿಗಳಲ್ಲಿ ಬದುಕುತ್ತಿರುವ ಮಕ್ಕಳು ಇಂದಿಗೂ ಡಿಜಿಟಲ್ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಅನೇಕ ಕಡೆಗಳಲ್ಲಿ ಸ್ಥಿರ ವಿದ್ಯುತ್ ಸಂಪರ್ಕ, ಇಂಟರ್ನೆಟ್ ಸೌಲಭ್ಯ ಹಾಗೂ ಡಿಜಿಟಲ್ ಸಾಧನಗಳ ಕೊರತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲ ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣ ಪಡೆಯಲು ಸಾಧ್ಯವೆಂದು ಭಾವಿಸುವುದು ವಾಸ್ತವಿಕತೆಯಿಂದ ದೂರವಾಗಿದೆ ಎಂದವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಶೇಷವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (SC/ST) ವಿದ್ಯಾರ್ಥಿಗಳ ಡಿಜಿಟಲ್ ಶಿಕ್ಷಣಕ್ಕಾಗಿ ಹಿಂದೆ ನೀಡಲಾಗುತ್ತಿದ್ದ ಲ್ಯಾಪ್ಟಾಪ್ ಹಾಗೂ ಟ್ಯಾಬ್ ಯೋಜನೆಗಳನ್ನು ಸ್ಥಗಿತಗೊಳಿಸಿರುವುದು ಬಡ ವಿದ್ಯಾರ್ಥಿಗಳಿಗೆ ದೊಡ್ಡ ಹಿನ್ನಡೆಯಾಗಿದೆ. ಒಂದು ಕಡೆ ಡಿಜಿಟಲ್ ಶಿಕ್ಷಣದ ಬಗ್ಗೆ ಮಾತನಾಡುತ್ತಾ, ಮತ್ತೊಂದು ಕಡೆ ಅದಕ್ಕೆ ಅಗತ್ಯವಾದ ಸಾಧನಗಳನ್ನೇ ನೀಡದೆ ಆನ್ಲೈನ್ ಶಿಕ್ಷಣ ಪಡೆಯುವಂತೆ ಹೇಳುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಹೇಳಿದ್ದಾರೆ.
ಇದಲ್ಲದೆ, ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡಿಕೊಳ್ಳುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪರೋಕ್ಷವಾಗಿ ಅನುಕೂಲವಾಗುವ ರೀತಿಯಲ್ಲಿ ಆನ್ಲೈನ್ ಶಿಕ್ಷಣದ ವ್ಯವಸ್ಥೆ ಜಾರಿಯಾದರೆ, ಅದರ ಆರ್ಥಿಕ ಹೊರೆ ಸಾಮಾನ್ಯ ಕುಟುಂಬಗಳ ಮೇಲೇ ಬೀಳುತ್ತದೆ. ಶಿಕ್ಷಣ ಪಡೆಯಲು ಹೆಚ್ಚುವರಿ ವೆಚ್ಚ ಮಾಡಬೇಕಾಗಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದಿದ್ದಾರೆ.
ಆದ್ದರಿಂದ ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿಗಳು ದೇಶದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳ ಸಾಮಾಜಿಕ ಮತ್ತು ಆರ್ಥಿಕ ವಾಸ್ತವತೆಗಳನ್ನು ಗಮನದಲ್ಲಿಟ್ಟುಕೊಂಡು, ಡಿಜಿಟಲ್ ಶಿಕ್ಷಣಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಮೊದಲು ಒದಗಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಾನ ಶಿಕ್ಷಣದ ಅವಕಾಶ ಸಿಗುವಂತೆ ಲ್ಯಾಪ್ಟಾಪ್, ಟ್ಯಾಬ್, ಇಂಟರ್ನೆಟ್ ಹಾಗೂ ಇತರೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅಜಮನಿ ಒತ್ತಾಯಿಸಿದ್ದಾರೆ.
ಶಾಲೆಗಳಿಗೆ ಆನ್ಲೈನ್ ಶಿಕ್ಷಣದ ಮೂಲಕ ಪಾಠ ಬೋಧನೆಗೆ ಪ್ರಧಾನಿ ಮೋದಿ ಸಲಹೆ ಹಾಸ್ಯಾಸ್ಪದ: ಅಜಮನಿ


