ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 13:
ಜಿಲ್ಲೆಯ ಜನರ ಬಹುಕಾಲದ ಕನಸಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ರಾಜ್ಯ ಸರ್ಕಾರದ ವಿಶೇಷಾಧಿಕಾರಿ ಡಾ. ರಾಜಶೇಖರ್ ದ್ಯಾಬೇರಿ ಅವರು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯವಿರುವ ಮೂಲ ಸೌಕರ್ಯ, ಆಸ್ಪತ್ರೆಯ ಸೌಲಭ್ಯಗಳು ಹಾಗೂ ಲಭ್ಯವಿರುವ ಸಂಪನ್ಮೂಲಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯ ಸದಸ್ಯರು ವಿಶೇಷಾಧಿಕಾರಿಗಳನ್ನು ಭೇಟಿ ಮಾಡಿ ಜಿಲ್ಲೆಯ ಜನರ ಬಹುವರ್ಷಗಳ ಬೇಡಿಕೆ, ವೈದ್ಯಕೀಯ ಶಿಕ್ಷಣದ ಅಗತ್ಯತೆ ಹಾಗೂ ಜಿಲ್ಲೆಯ ಆರೋಗ್ಯ ಕ್ಷೇತ್ರದ ಸವಾಲುಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.
ಸಮಿತಿಯ ಸದಸ್ಯರು ವಿಜಯಪುರವು ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಯಾಗಿದ್ದರೂ ಇಲ್ಲಿಯವರೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗದಿರುವುದು ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನ್ಯಾಯವಾಗಿದೆ ಎಂದು ಅಭಿಪ್ರಾಯಪಟ್ಟರು.
ವೈದ್ಯಕೀಯ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ದೂರದ ಜಿಲ್ಲೆಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದು, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ ಎಂದು ತಿಳಿಸಿದರು.
ಇದಲ್ಲದೆ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾದಲ್ಲಿ ಜಿಲ್ಲೆಯ ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚುವುದರ ಜೊತೆಗೆ ತಜ್ಞ ವೈದ್ಯರ ಲಭ್ಯತೆ, ಆಧುನಿಕ ಚಿಕಿತ್ಸಾ ಸೌಲಭ್ಯಗಳು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ ಎಂದು ಹೋರಾಟ ಸಮಿತಿ ಪ್ರತಿಪಾದಿಸಿತು.
ವಿಶೇಷಾಧಿಕಾರಿ ಡಾ. ರಾಜಶೇಖರ ದ್ಯಾಬೇರಿ ಅವರು ಆಸ್ಪತ್ರೆಯ ವಿವಿಧ ವಿಭಾಗಗಳನ್ನು ಪರಿಶೀಲಿಸಿ, ಅಗತ್ಯ ಮಾಹಿತಿಯನ್ನು ಸಂಗ್ರಹಿಸಿದರು. ಪರಿಶೀಲನೆ ವರದಿಯನ್ನು ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸದಸ್ಯರು, ಜಿಲ್ಲೆಯ ಜನರ ನ್ಯಾಯಸಮ್ಮತ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ, ಮುಂಬರುವ ಬಜೆಟ್ ಅಥವಾ ಆಡಳಿತಾತ್ಮಕ ಹಂತದಲ್ಲೇ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅಧಿಕೃತ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.
ವಿಜಯಪುರ ಜಿಲ್ಲೆಯ ಅಭಿವೃದ್ಧಿ, ಆರೋಗ್ಯ ಸೇವೆಗಳ ವಿಸ್ತರಣೆ ಹಾಗೂ ಯುವಕರ ಭವಿಷ್ಯದ ದೃಷ್ಟಿಯಿಂದ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಅತ್ಯಂತ ಅಗತ್ಯವಾಗಿದ್ದು, ಈ ಬೇಡಿಕೆ ಈಡೇರುವವರೆಗೆ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ ಹೋರಾಟ ಸಮಿತಿಯ ಸದಸ್ಯರಾದ ಅನಿಲ್ ಹೊಸಮನಿ, ಅರವಿಂದ ಕುಲಕರ್ಣಿ, ಬಿ.ಭಾಗವಾನ ರೆಡ್ಡಿ, ಅಕ್ರಮ ಮಾಶಾಳಕರ, ಸುರೇಶ ಜೀಬಿ, ಪೂಜ್ಯ ಸಂಗನಬಸವ ಸ್ವಾಮೀಜಿ, ಲಲಿತಾ ಬಿಜ್ಜರಗಿ, ಎಲ್.ಎಚ್. ಲೆಂಡಿ, ಸಿದ್ದಲಿಂಗ ಬಾಗೇವಾಡಿ, ಡಾ. ಗುರಿಕರ, ಗಿರೀಶ ಕಲಘಟಗಿ, ಲಕ್ಷ್ಮಣ ಕಂಬಾಗಿ, ಸಿದ್ರಾಮ ಹಿರೇಮಠ, ಮಲ್ಲು ಕಾಮನಕೇರಿ, ಶಿವರಂಜಿನಿ ಮತ್ತಿತರರು ಇದ್ದರು.
ರಾಜ್ಯ ಸರ್ಕಾರದ ವಿಶೇಷಾಧಿಕಾರಿ ಡಾ. ರಾಜಶೇಖರ ದ್ಯಾಬೇರಿ ಜಿಲ್ಲಾ ಆಸ್ಪತ್ರೆಗೆ ಭೇಟಿ, ಪರಿಶೀಲನೆ


