ಸಂವಿಧಾನದ ಆಶಯದಂತೆ ನಡೆಯುವುದಾದರೆ ಇಂಡಿ ವಿಧಾನಸಭಾ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಿ-ಪ್ರೊ. ಮಾಡ್ಯಾಳ

ಸಪ್ತಸಾಗರ ವಾರ್ತೆ, ವಿಜಯಪುರ,ಜೂ. 14:
ಭಾರತದ ಸಂವಿಧಾನದ ಆಶಯ ಎಲ್ಲರಿಗೂ ಸಮಾನ ಅವಕಾಶಗಳು ಸ್ಥಾನಮಾನಗಳು ಸಿಗಬೇಕೆಂಬುದಾಗಿದೆ. ಆದರೆ 1952 ರಿಂದ 2026 ರ ವರೆಗೆ ಇಂಡಿ ಕ್ಷೇತ್ರದಿಂದ ಯಾರು ಸಚಿವರಾಗಿಲ್ಲ ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ 223 ಕ್ಷೇತ್ರಗಳಿಗೆ ಸಚಿವ ಸ್ಥಾನ ಸಿಕ್ಕಿದೆ.ಆದರೆ ಇಂಡಿಯು ಸಚಿವ ಸ್ಥಾನ ಸಿಗದ ಏಕೈಕ ವಿಧಾನಸಭಾ ಕ್ಷೇತ್ರವಾಗಿದೆ. ಇದೆ ತಿಂಗಳು ೨೦ರ ನಂತರ ಹೊಸ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಇಂಡಿ ಶಾಸಕ ಯಶಾವಂತರಾಯಗೌಡ ಪಾಟೀಲ ಅವರಿಗೆ ಸಚಿವಸ್ಥಾನ ನೀಡಬೇಕು ಎಂದು ಶಿವಯೋಗಪ್ಪ ಮಾಡ್ಯಾಳ
ಸಿಂಡಿಕೇಟ್ ಸದಸ್ಯರು
ವಿಜಯಪುರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಶಿವಯೋಗಪ್ಪ ಮಾಡ್ಯಾಳ ಆಗ್ರಹಿಸಿದ್ದಾರೆ. ಪತ್ರಿಕಾ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನದ ಆಶಯದಂತೆ ನಡೆಯುವುದಾದರೆ ಈ ತಾರತಮ್ಯವನ್ನು ಹೋಗಲಾಡಿಸಿ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ಕೊಡಬೇಕು.
ಕರ್ನಾಟಕದ ಕೆಲವೊಂದು ಕ್ಷೇತ್ರಗಳು ಖಾಯಂ ಸಚಿವ ಸ್ಥಾನ ಹೊಂದಿವೆ. ಅವು ಅಭಿವೃದ್ಧಿಯು ಆಗಿವೆ. ಆದರೆ ರಾಜಕೀಯವಾಗಿ ನಿರ್ಲಕ್ಷಕ್ಕೆ ಒಳಗಾದ ಹಿಂದುಳಿದ ಇಂಡಿ ಮತ ಕ್ಷೇತ್ರಕ್ಕೆ ಸಚಿವ ಸ್ಥಾನ ವಂಚಿತವಾಗಿ ಅಭಿವೃದ್ಧಿ ಕಾಣದೆ ಹಾಗೆ ಉಳಿದಿದೆ. ಯಾಕೆ? ಈ ಕ್ಷೇತ್ರ ಅಭಿವೃದ್ಧಿ ಆಗಬಾರದೆ? ಇಲ್ಲಿನ ಜನಜೀವನ ಸುಧಾರಣೆಯಾಗಬಾರದೆ? ಇದು ಸಂವಿಧಾನದ ಆಶಯದ ವಿರುದ್ಧವಾಗಿದೆ. ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಇಲ್ಲಿನ ಹಳ್ಳಿಗಳು ಇನ್ನೂ ಹಿಂದುಳಿದಿವೆ. ಈ ಪ್ರದೇಶದ ಜನರ ಬದುಕು ಸುಧಾರಿಸಲು ಅಭಿವೃದ್ಧಿಪರವಾದ ಚಿಂತನೆಗಳನ್ನು ಹೊಂದಿದ ಸತತ ಮೂರು ಬಾರಿ ಶಾಸಕರಾಗಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಈ ಭಾಗದ ಜನಪ್ರಿಯ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿ ಅಸಮಾನತೆಯನ್ನು ಹೋಗಲಾಡಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

Share this