ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 15: ಕನಕದಾಸರ ಕೀರ್ತನೆಗಳು ಸಮಾನತೆ, ಮಾನವೀಯತೆ, ವೈಚಾರಿಕತೆಯ ಆಧಾರದ ಮೇಲೆ ಸ್ವಸ್ಥ ಸಮಾಜ ನಿರ್ಮಿಸುವ ಸಾಮಾಜಿಕ ಕಾಳಜಿ ಹೊಂದಿದ್ದು, ಅವು ಸಾಮಾಜಿಕ ಪರಿವರ್ತನೆಗೆ ದಾರಿದೀಪವಾಗಿವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ರವಿವಾರ ಸಂಜೆ ಶ್ರೀ ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿ ವತಿಯಿಂದ ಹಮ್ಮಿಕೊಂಡ ರಾಜ್ಯ ಮಟ್ಟದ ಆನ್ ಲೈನ್ 116 ನೇ ಉಪನ್ಯಾಸದಲ್ಲಿ ‘ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಮೌಲ್ಯಗಳು’ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.
ಕನಕದಾಸರ ಬದುಕು ನಮ್ಮೆಲ್ಲರ ಬದುಕಿಗೆ ಆದರ್ಶದ ಹೊತ್ತಿಗೆ. ಅವರ ಶ್ರಮಿಕ ಸಂಸ್ಕೃತಿಯ ಗೌರವ, ಮಾನವೀಯತೆಯ ಸಂದೇಶವು ಪ್ರಸ್ತುತ ಭಾರತದ ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಆಗಿದೆ. ಪ್ರಸ್ತುತ ಭಾರತದಲ್ಲಿ ಜಾತಿ ತಾರತಮ್ಯ ನಿವಾರಿಸಿ, ಎಲ್ಲರೂ ಸಮಾನರು ಎಂಬ ಭಾವ ಮೂಡಿಸಲು ಅವರ ಚಿಂತನೆಗಳು ಅತ್ಯಗತ್ಯ ಎಂದು ಹೇಳಿದರು.
ಸರ್ವಧರ್ಮ ಸಹಿಷ್ಣುತೆಯನ್ನು ಜಗತ್ತಿಗೆ ಸಾರಿದ ಕನಕರ ಕೀರ್ತನೆಗಳ ವಿಚಾರಗಳು ಇಂದಿಗೂ ಪ್ರಸ್ತುತ. ಅವು ಮೌಢ್ಯವನ್ನು ಧಿಕ್ಕರಿಸಿ, ಸ್ತ್ರೀಪರ ಚಿಂತನೆಗಳನ್ನು ನೀಡಿವೆ. ಕನಕರ ಜೋಳಿಗೆಯಲ್ಲಿ ಭಕ್ತಿಯ ಸಿಂಚನವಿದೆ. ಅವರ ನುಡಿಮುತ್ತುಗಳಲ್ಲಿ ಮಧುರಾಮೃತ ಮತ್ತು ನಮಗೆಲ್ಲರಿಗೂ ಜೀವನ ಪಾಠವಿದೆ ಎಂದು ಹೇಳಿದರು.
21 ನೇ ಶತಮಾನದಲ್ಲಿಯೂ ಜಾತಿ,ಕುಲ,ಮೌಢ್ಯ ನಮ್ಮನ್ನು ಕಾಡುತ್ತಿವೆ. ಅವರು ತಮ್ಮ ಕೀರ್ತನೆಯ ಮೂಲಕ ನಮಗೆ ಎಚ್ಚರಿಕೆ ನೀಡಿ, ಪ್ರತಿಭೆ-ಗುಣ-ನಡತೆ-ಅರ್ಹತೆಯ ಮೂಲಕ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಬೇಕೇ ಹೊರತು ಅವನ ಜಾತಿಯಿಂದಲ್ಲ ಎಂಬ ಕನಕದಾಸರ ತತ್ವ ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಕೃಷ್ಣ ಖಾನಾಪುರ, ಆನಂದ ಹಕ್ಕೆನ್ನವರ, ಡಾ ಕರವೀರಪ್ರಭು,ಮೈಲಾರಿ, ನೀಲಕಂಠ,ಸೋಮಣ್ಣ ಮಲ್ಲೂರ, ಜ್ಯೋತಿ, ಶೋಭಾ, ಯಶವಂತ, ನೇತ್ರಾ, ಮಂಜುನಾಥ ಪೂಜಾರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಶಿಕ್ಷಕಿ ಸವಿತಾ ಎಸ್ ಜಿ ಪ್ರಾರ್ಥಿಸಿದರು. ಸಿಂಚನಾ ಅಮೃತಾ ಸ್ವಾಗತಿಸಿದರು. ಶ್ವೇತಾ ಸನದಿ ನಿರೂಪಿಸಿದರು. ಕವಿತಾ ಬೇವನೂರ ವಂದಿಸಿದರು.
ಇಂದಿನ ವೇಗದ-ತಂತ್ರಜ್ಞಾನ ಆಧಾರಿತ ಯುವ ಪೀಳಿಗೆಗೆ ಕನಕದಾಸರ ಚಿಂತನೆಗಳು ಅತ್ಯಂತ ಪ್ರಸ್ತುತ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾನಸಿಕ ನೆಮ್ಮದಿ ಜತೆಗೆ ಸೌಹಾರ್ದಯುತ ಬದುಕನ್ನು ಕಟ್ಟಿಕೊಳ್ಳಲು ಅವರ ತತ್ವಾದರ್ಶಗಳು ನಮಗೆ ಸ್ಪೂರ್ತಿಯಾಗಿವೆ.
ಕನಕದಾಸರ ಬದುಕು ನಮ್ಮೆಲ್ಲರ ಬದುಕಿಗೆ ಆದರ್ಶದ ಹೊತ್ತಿಗೆ-ಸಂತೋಷ ಬಂಡೆ


