ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 22:
ಆರ್‌ಎಸ್‌ಎಸ್ ಕುರಿತು ರಾಜ್ಯದ ಗೃಹ ಸಚಿವ ಪ್ರಿಯಾಂಕಾ ಖರ್ಗೆ ಅವರು ನೀಡಿರುವ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿರುವ ಮಾಜಿ ಶಾಸಕ ರಾಜು ಆಲಗೂರ ಅವರು, ಈ ವಿಚಾರದಲ್ಲಿ ಮಾಜಿ ಸಂಸದ ರಮೇಶ ಜಿಗಜಿಣಗಿ ನೀಡಿರುವ ಪ್ರತಿಕ್ರಿಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಅವರು, ರಾಜ್ಯದ ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ದೇಶದಲ್ಲಿರುವ ಎಲ್ಲ ಸಂಘ-ಸಂಸ್ಥೆಗಳು ನೋಂದಣಿ ಮಾಡಿಕೊಂಡಿರುವಾಗ ಆರ್‌ಎಸ್‌ಎಸ್ ಏಕೆ ನೋಂದಣಿ ಮಾಡಿಕೊಳ್ಳಬಾರದು ಎಂದು ಪ್ರಶ್ನೆ ಎತ್ತಿರುವುದು ಸಂವಿಧಾನಬದ್ಧ ಹಕ್ಕಾಗಿದೆ ಎಂದು ಹೇಳಿದ್ದಾರೆ.
ಈ ಹೇಳಿಕೆಗೆ ಪ್ರತಿಯಾಗಿ ಮಾಜಿ ಸಂಸದ ರಮೇಶ ಜಿಗಜಿಣಗಿ ಅವರು ಪ್ರಿಯಾಂಕ ಖರ್ಗೆ ಅವರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿ, ದಲಿತರು ಆರ್‌ಎಸ್‌ಎಸ್ ವಿರುದ್ಧ ಮಾತನಾಡಬಾರದು ಎಂದು ಹೇಳಿರುವುದು ಖಂಡನೀಯ ಎಂದು ಆಲಗೂರ ಆರೋಪಿಸಿದ್ದಾರೆ.
“ಆರ್‌ಎಸ್‌ಎಸ್ ಅನ್ನು ದಲಿತರು ಪ್ರಶ್ನಿಸಿದರೆ ಸರ್ವನಾಶವಾಗುತ್ತದೆ ಎಂದಾದರೆ, ಅದು ಭಯೋತ್ಪಾದಕ ಸಂಘಟನೆಯೇ?” ಎಂದು ಪ್ರಶ್ನಿಸಿರುವ ಅವರು, ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನದ ಅಡಿಯಲ್ಲಿ ಯಾವುದೇ ಸಂಘಟನೆ ಅಥವಾ ವಿಷಯವನ್ನು ಪ್ರಶ್ನಿಸುವ ಹಕ್ಕಿದೆ ಎಂಬುದನ್ನು ಜಿಗಜಿಣಗಿ ಅವರು ಮರೆತಂತಿದೆ ಎಂದು ಟೀಕಿಸಿದ್ದಾರೆ.
ದಲಿತರ ಪ್ರತಿನಿಧಿಯಾಗಿರುವ ರಮೇಶ ಜಿಗಜಿಣಗಿ ಅವರು ಲೋಕಸಭೆಯಲ್ಲಿ ಅಥವಾ ಸಾರ್ವಜನಿಕವಾಗಿ ದಲಿತರ ಸಮಸ್ಯೆಗಳ ಬಗ್ಗೆ ಎಷ್ಟು ಬಾರಿ ಧ್ವನಿ ಎತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಪ್ರಿಯಾಂಕ ಖರ್ಗೆ ಅಥವಾ ಆರ್‌ಎಸ್‌ಎಸ್ ಕುರಿತು ಪ್ರಶ್ನಿಸುವವರ ವಿರುದ್ಧ ಹಗುರವಾಗಿ ಮಾತನಾಡಿದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಜು ಆಲಗೂರ ಎಚ್ಚರಿಕೆ ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ವಿರುದ್ದ ಹೇಳಿಕೆ: ಜಿಗಜಿಣಗಿಗೆ ರಾಜು ಆಲಗೂರ ಎಚ್ಚರಿಕೆ


