ಸಪ್ತಸಾಗರ ವಾರ್ತೆ,ವಿಜಯಪುರ, ಜೂ.23:
ಅಂತರರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಹಿನ್ನೆಲ್ಲೆಯಲ್ಲಿ ಜಿಲ್ಲೆಯಾದ್ಯಂತ ಒಂದು ವಾರಗಳ ಕಾಲ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಜಾಥಾ, ವಿಚಾರ ಸಂಕಿರಣ ಹಾಗೂ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆನಂದ್ ಕೆ ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಂಗಳವಾರ ಮಾದಕ ದ್ರವ್ಯಗಳ ದುರ್ಬಳಕೆ ಮತ್ತು ಅಕ್ರಮ ಸಾಗಾಣಿಕೆ ವಿರುದ್ದ ಅಂತರರಾಷ್ಟ್ರೀಯ ದಿನ ಆಚರಣೆಯ ದಿನ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಮಾದಕ ದ್ರವ್ಯಗಳ ವ್ಯಸನವು ಇಂದು ಸಮಾಜ ಎದುರಿಸುತ್ತಿರುವ ಗಂಭೀರ ಸಮಸ್ಯೆಯಾಗಿದ್ದು, ಯುವಜನತೆ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುವಂತಹ ದುಷ್ಚಟಗಳಿಂದ ದೂರವಿರಬೇಕು ಎಂದು ಕರೆ ನೀಡಿದರು. ಮಾದಕ ವ್ಯಸನವು ವ್ಯಕ್ತಿಯ ಜೀವನವನ್ನಷ್ಟೇ ಅಲ್ಲ, ಕುಟುಂಬ ಮತ್ತು ಸಮಾಜದ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಇದರಿಂದ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ಹೇಳಿದರು.
ಯುವಕರು ಮಾದಕ ವಸ್ತುಗಳ ಆಕರ್ಷಣೆಗೆ ಒಳಗಾಗದೇ ಶಿಕ್ಷಣ, ಕ್ರೀಡೆ ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಕುರಿತು ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ವ್ಯಸನಿಗಳ ಗುರುತಿಸುವಿಕೆ, ಆರೋಗ್ಯ ತಪಾಸಣೆ ಹಾಗೂ ಕೌನ್ಸೆಲಿಂಗ್ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ವ್ಯಸನದಿಂದ ಹೊರಬಂದು,ಸೂಕ್ತ ಚಿಕಿತ್ಸೆ ಮತ್ತು ಸಮಾಲೋಚನೆಯ ಮೂಲಕ ಹೊಸ ಬದುಕು ಆರಂಭಿಸಲು ಸಾಧ್ಯವಿದೆ ಎಂದು ಹೇಳಿದರು. ಟೆಲಿಮನಸ್ಸ ಟೋಲ್-ಫ್ರೀ ಮಾನಸಿಕ ಆರೋಗ್ಯದ ಸಹಾಯವಾಣಿ ಸಂಖ್ಯೆ 14416 ಉಚಿತ ಕರೆಮಾಡುವ ಮೂಲಕ ಕನ್ನಡ ಭಾಷೆಯಲ್ಲಿಯೂ ಸಹಾಯ ಮಾಡುವ ಈ ಸಹಾಯವಾಣಿಗೆ ಕರೆ ಮಾಡಿ ತಮ್ಮ ಎಲ್ಲ ತರಹದ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು, ಇದರ ಪ್ರಯೋಜನ ಪಡೆಯಬೇಕು ಎಂದರು.
ಪ್ರತಿಜ್ಞಾವಿಧಿ ಬೋಧನೆ
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಹಾಗೂ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಮಾದಕ ದ್ರವ್ಯಗಳ ದುರುಪಯೋಗದಿಂದ ಸಮಾಜವನ್ನು ಮುಕ್ತಗೊಳಿಸಲು ಪ್ರತಿಯೊಬ್ಬರೂ ಬದ್ಧರಾಗಬೇಕೆಂದು ಕರೆ ನೀಡಿದರು.
ಪೊಲೀಸ್ ಇಲಾಖೆಯಿಂದ ವಾರಪೂರ್ತಿ ಜಾಗೃತಿ ಅಭಿಯಾನ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಜಿಲ್ಲೆಯ ಪ್ರತಿಯೊಂದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈಗಾಗಲೇ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರ ವಿತರಣೆ, ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಅಭಿಯಾನ, ವಿಚಾರ ಸಂಕಿರಣಗಳು ಹಾಗೂ ವಿವಿಧ ಸ್ಪರ್ಧೆಗಳ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಜೂನ್ 26ರಂದು ಜಿಲ್ಲೆಯಾದ್ಯಂತ ಕಳೆದ ಒಂದು ವರ್ಷದ ಅವಧಿಯಲ್ಲಿ ವಶಪಡಿಸಿಕೊಂಡಿರುವ ಮಾದಕ ವಸ್ತುಗಳ ನಾಶಗೊಳಿಸುವ ಪ್ರಕ್ರಿಯೆ ಕೈಗೊಳ್ಳಲಾಗುವುದು. ಒಟ್ಟು ಐದು ದಿನಗಳ ಕಾಲ ವಿವಿಧ ಅಭಿಯಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಮಾದಕ ದ್ರವ್ಯಗಳ ವಿರುದ್ಧದ ಅಭಿಯಾನ ಕೇವಲ ಪೊಲೀಸ್ ಇಲಾಖೆಯ ಜವಾಬ್ದಾರಿಯಲ್ಲ, ಅದು ಸಮಾಜದ ಪ್ರತಿಯೊಬ್ಬರ ಹೋರಾಟವಾಗಬೇಕು ಎಂದು ಹೇಳಿದರು.
ಪಲ್ಸ್ ಪೋಲಿಯೊ, ಕ್ಷಯರೋಗ ನಿರ್ಮೂಲನೆ ಸೇರಿದಂತೆ ಹಲವು ಸಾಮಾಜಿಕ ಅಭಿಯಾನಗಳಲ್ಲಿ ಜನರ ಸಹಭಾಗಿತ್ವದಿಂದ ಯಶಸ್ಸು ಸಾಧಿಸಿರುವಂತೆ, ಮಾದಕ ದ್ರವ್ಯ ನಿರ್ಮೂಲನೆಯಲ್ಲಿಯೂ ಸಮಾಜದ ಪಾಲ್ಗೊಳ್ಳುವಿಕೆ ಅತ್ಯಗತ್ಯವಾಗಿದೆ ಎಂದರು.
ಮಾದಕ ವ್ಯಸನವು ಯುವಶಕ್ತಿಯ ಮೇಲೆ ಮಾತ್ರವಲ್ಲ,ದೇಶದ ಆರ್ಥಿಕತೆ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ಮತ್ತು ಯುವಕರು ವ್ಯಸನದ ದಾಸರಾಗದೆ ಆತ್ಮವಿಶ್ವಾಸ, ಉತ್ತಮ ಮೌಲ್ಯಗಳು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕುಟುಂಬದ ನಿರೀಕ್ಷೆಗಳಿಗೆ ತಕ್ಕಂತೆ ಬದುಕು ಕಟ್ಟಿಕೊಳ್ಳುವ ಮೂಲಕ ಗೌರವಯುತ ಜೀವನ ನಡೆಸಬೇಕು. ಆರೋಗ್ಯವಂತ ಮತ್ತು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ,ಸಿಪಿಐ ಆರೀಪ್ ಮುಷಾಪುರಿ, ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಡಾ.ಎಲ್.ಎಚ್ ಬಿದರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಸಾರ್ವಜನಿಕರು ಭಾಗವಹಿಸಿದ್ದರು.
ಜನಜಾಗೃತಿ ಜಾಥಾ ಚಾಲನೆ
ನಗರದ ಶ್ರೀ ಸಿದ್ಧೇಶ್ವರ ದೇವಾಸ್ಥಾನದ ಆವರಣದಲ್ಲಿ ಮಾದಕ ದ್ರವ್ಯಗಳ ದುರ್ಬಳಕೆ ಮತ್ತು ಅಕ್ರಮ ಸಾಗಾಣಿಕೆ ವಿರುದ್ದ ಅಂತರರಾಷ್ಟ್ರೀಯ ದಿನ ಆಚರಣೆಯ ಅಂಗವಾಗಿ ನಡೆದ ಜನ ಜಾಗೃತಿ ಜಾಥಾಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಿಷಿ ಆನಂದ ಅವರು ಜಂಟಿಯಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮನಗೌಡ ಹಟ್ಟಿ ಸೇರಿದಂತೆ ಜಿಲ್ಲಾ ಔಷಧ ನಿಯಂತ್ರಣ ಇಲಾಖೆ,ಆರೋಗ್ಯ ಇಲಾಖೆ ,ಜಿಲ್ಲಾ ಮನೋವೈದ್ಯಾಧಿಕಾರಿ ಡಾ.ಮಂಜುನಾಥ ಮಸಳಿ, ಅಧಿಕಾರಿಳು ಹಾಗೂ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲದಲ್ಲಿ ಪಾಲ್ಗೊಂಡಿದ್ದರು.
ಜಾಥಾವು ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡು, ಗಾಂಧಿ ವೃತ್ತ ,ಬಸವೇಶ್ವರ ವೃತ್ತ, ಡಾ.ಬಿ.ಆರ್ ಅಂಬೇಡ್ಕರ ವೃತ್ತದಿಂದ ಸಾಗಿ, ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಮಾವೇಶಗೊಂಡಿತು.


