ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ-ಸಚಿವ ಡಾ.ಎಂ.ಬಿ. ಪಾಟೀಲ ಸೂಚನೆ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 23:
ಜುಲೈ 2ನೇ ವಾರದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಆದಾಗ್ಯೂ ಮಳೆ ಅಭಾವದಿಂದ ಜಿಲ್ಲೆಯಾದ್ಯಂತ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜವಾಬ್ದಾರಿ ಅರಿತು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಡಾ. ಎಂ.ಬಿ. ಪಾಟೀಲ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆ ಸೇರಿದಂತೆ ಗ್ರಾಮೀಣ, ‌ನಗರ, ಸ್ಥಳೀಯ ಸಂಸ್ಥೆ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಆಯಾ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು.
ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ವಿದ್ಯುತ್‌ ಪರಿವರ್ತಕಗಳ ಸಮಸ್ಯೆಯಿದ್ದಲ್ಲಿ ಸ್ಪೀಡ್ ಅಪ್ ಮಾಡಿ ಕುಡಿಯುವ ನೀರಿಗೆ ತಕ್ಷಣಕ್ಕೆ ವಿದ್ಯುತ್‌ ಪೂರೈಕೆಯಾಗುವಂತೆ ಹೆಸ್ಕಾಂ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಖಾಸಗಿ ಬೋರ್‌ ವೆಲ್‌ ಗುರುತಿಸಿ
ಎಲ್ಲೆಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಬಹುದೋ,ಮುಂಚಿತವಾಗಿ ಮಾಹಿತಿ ಪಡೆದುಕೊಂಡು ಅಂತಹ ಸ್ಥಳದಲ್ಲಿ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅದಕ್ಕೆಂದೇ ಖಾಸಗಿ ಬೋರವೆಲ್ ಗಳನ್ನು ಗುರುತಿಸಿ, ಅತಿ ಅವಶ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ವಹಿಸಬೇಕು ಎಂದರು. ಮಳೆ ಬರುವವರೆಗೆ ಮುಂಚಿತವಾಗಿ ಯೋಜನೆ ರೂಪಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದರು.

ನೀರುನಿರ್ವಹಣೆ ಅಚ್ಚುಕಟ್ಟಾಗಿರಲಿ
ಜುಲೈ ಎರಡನೇ ವಾರದಲ್ಲಿ ಮಳೆಯಾಗುವ ಆಶಾಭಾವನೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯಿದೆ. ಈವರೆಗಿನ ಮಳೆ ಕೊರತೆಯಿಂದಾಗಿ ಯಾವುದೇ ಸಮಸ್ಯೆ ಯಾಗದಂತೆ ಅಚ್ಚು-ಕಟ್ಟಾಗಿ ನೀರು ನಿರ್ವಹಣೆ‌‌ ಮಾಡಬೇಕು ಎಂದು ಸಚಿವರಾದ ಎಂ.ಬಿ. ಪಾಟೀಲ ತಿಳಿಸಿದರು.
ಗ್ರಾಮೀಣ, ‌ನಗರ, ಸ್ಥಳೀಯ ಸಂಸ್ಥೆ ಹಾಗೂ ಪಾಲಿಕೆ ಸೇರಿದಂತೆ ಜಿಲ್ಲೆಯಾದ್ಯಂತ ಕುಡಿಯುವ ನೀರಿಗೆ ಸಂಬಂಧಿಸಿದಂತೆ ತಾಲೂಕು ಮಟ್ಟದಲ್ಲಿ ಆಗಾಗ ಟಾಸ್ಕ್ ಪೋರ್ಸ್ ಸಭೆ ನಡೆಸಿ ಸಮಸ್ಯೆ ಉಲ್ಬಣಗೊಳ್ಳದಂತೆ ಸ್ಥಳೀಯ ಮಟ್ಟದಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕು ಎಂದರು.

ನಿರ್ಲಕ್ಷ್ಯ ವಹಿಸಿದರೆ ಕ್ರಮ:
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಸಮನ್ವಯತೆಯಿಂದ ಗಂಭೀರವಾಗಿ ಕಾರ್ಯನಿರ್ವಹಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು. ಇನ್ನೊಂದೆಡೆ ‌ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಮೊಬೈಲ್ ಆನ್ ಇಟ್ಟುಕೊಂಡೇ ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಮಳೆಯಾಗಿ ಒಳಹರಿವು ಹೆಚ್ಚಳವಾಗುವವರೆಗೆ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ಉದ್ಧೇಶಕ್ಕಾಗಿ ನೀರನ್ನು ಕಾಯ್ದಿರಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಸಚಿವರು ಕುಡಿಯುವ ನೀರಿಗೆ ಆದ್ಯತೆಯಾಗಿಸಿಕೊಂಡು ಅತಿ ಜಾಗೃತೆಯಿಂದ ಕಾರ್ಯ ನಿರ್ವಹಿಸಬೇಕು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಆದಾಗ್ಯೂ ಮಳೆಯಾಗುವವರೆಗೆ ಎದುರಾಗುವ ಸಮಸ್ಯೆಗಳಿಗೆ ಅಧಿಕಾರಿಗಳೆಲ್ಲರೂ ಸಜ್ಜಾಗಬೇಕು ಎಂದು ಸಚಿವರು ಹೇಳಿದರು.
ಮಳೆ ಅಭಾವದಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಆಗುವ ಪರಿಣಾಮದ ಬಗ್ಗೆ ಗಂಭೀರವಾಗಿ ಕೆಲಸ ಮಾಡಬೇಕು ಎಂದರು.
ನಾರಾಯಣಪುರ ಹಿನ್ನೀರಿನ ಬಳಕೆ ಯೋಜನೆಯಿಂದ ಯಾವುದೇ ಕುಡಿಯುವ ನೀರಿನ ಸಮಸ್ಯೆ‌ಇರುವುದಿಲ್ಲ ಧೂಳಖೇಡದಲ್ಲಿ ಖಾಸಗಿ ಬೋರವೆಲ್, ಬಾವಿ ಜಲಮೂಲಗಳನ್ನು ಗುರುತಿಸಿಟ್ಟುಕೊಳ್ಳಬೇಕು. ಧೂಳಖೇಡ ಮತ್ತು ಆರು ಹಳ್ಳಿಗಳಿಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಇಂಡಿಯಲ್ಲಿ ಅಲ್ಲಿನ ನಗರಸಭೆ ಅಧಿಕಾರಿಗಳು ಸಂದರ್ಭ ಅವಲೋಕಿಸಿ ಯಾವುದೇ ಸಮಸ್ಯೆಯಾಗದಂತೆ ಅಧಿಕಾರಿಗಳು ಸಮನ್ವಯ ಸಾಧಿಸಿ ನಕ್ರಮ ಕೈಗೊಳ್ಳಬೇಕು. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದರು. ಬಹುಹಳ್ಳಿ ಕುಡಿಯುವ ನೀರಿನ ವ್ಯವಸ್ಥೆ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಐಬಿಸಿ 11 ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಇದ್ದು, ಹೊರ್ತಿ ಭಾಗದಲ್ಲಿ ಜುಲೈ 15ರವರೆಗೆ ಸಮಸ್ಯೆಯಾಗುವುದಿಲ್ಲ.

ನೀರು ಪೋಲಾಗದಂತೆ ನೋಡಿಕೊಳ್ಳಬೇಕು
ಇಂಚಗೇರಿ, ಹೊರ್ತಿ ಭಾಗದಲ್ಲಿ ಬಲು ಎಚ್ಚರಿಕೆಯಿಂದ ನೀರಿನ ಸಮನ್ವಯತೆ ಕಾಯ್ದುಕೊಂಡು ಜುಲೈ 15ರವರೆಗೆ ನೀರು ಸದ್ಬಳಕೆಯಾಗುವ ನಿಟ್ಟಿನಲ್ಲಿ ನೀರು ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಕಟ್ಟು-ನಿಟ್ಟಿನ ಸೂಚನೆ ನೀಡಿದರು.
ಲೋಣಿ ‌ಕೆಬಿ ಹಾಗೂ ಬಳಗಾನೂರ ಕೆರೆ ತುಂಬಿವೆ.
ವಿಜಯಪುರ‌ ನಗರದಲ್ಲಿ ಭೂತನಾಳ ಕೆರೆಯಿಂದ ಐದು ವಾರ್ಡಗೆ ನೀರಿನ ತಾಪತ್ರಯವಿಲ್ಲ. ತಾಜಬಾವಡಿ ಪುನಶ್ಚೇತನಗೊಳಿಸಿದ್ದು ನೀರಿನ ಸದ್ಭಳಕೆಯಾಗಬೇಕು. ತಾಜಬಾವಡಿಗೆ ಯುಜಿಡಿ ನೀರು ಸೇರ್ಪಡೆಯಾಗದಂತೆ ಯೋಜನೆ ಸಿದ್ಧಪಡಿಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ ಜಿಲ್ಲಾಧಿಕಾರಿ ಆನಂದ ಕೆ. ಅವರು ಸಚಿವರಿಗೆ ವಿವರಣೆ ನೀಡಿದರು.

ನಗರದಲ್ಲಿ ಸಮರ್ಪಕ ನೀರು ಪೂರೈಸಿ
ನಗರದ ಎಲ್ಲ ವಾರ್ಡುಗಳಿಗೆ ಸಮರ್ಪಕ ನೀರು ಒದಗಿಸಬೇಕು. ಈ ನಿಟ್ಟಿನಲ್ಲಿ ತಾಜಬಾವಡಿ ನೀರು ಬಳಸಲು ಅಧಿಕಾರಿಗಳು ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸಬೇಕು. ನಗರದಲ್ಲೂ ಸಹ ಖಾಸಗಿ ಬೋರವೆಲ್ ಗುರುತಿಸಿ ಗರಿಷ್ಠ ನೀರು ಪರೀಕ್ಷಿಸಿ, ಖಾಸಗಿ ಬೋರವೆಲ್ ವಾಟರ್ ಮ್ಯಾನೆಜಮೆಂಟ್ ಕೃಷ್ಣಾ ನದಿಯಿಂದ ಸರಬರಾಜಾಗುವ ನೀರನ್ನು ಕುಡಿಯುವ ನೀರಿಗಾಗಿ ಬಳಸಿ, ಉಳಿದಂತೆ ಬಾವಡಿ ಹಾಗೂ ಖಾಸಗಿ ಬೋರವೆಲ್ ಗುರುತಿಸಿಟ್ಟುಕೊಳ್ಳಬೇಕು ಎಂದರು.
ಬಾವಿ ಮತ್ತು ಖಾಸಗಿ ಬೋರವೆಲ್ ನೀರು ಪರೀಕ್ಷಿಸಿ, ಮನಸ್ಸಿದ್ದಲ್ಲಿ ಮಾರ್ಗ ಎಂಬಂತೆ ಕಾರ್ಯ ನಿರ್ವಹಿಸುವುದರ ಜೊತೆಗೆ ವಾರ್ಡವೈಸ್ ಮೈಕ್ರೊಪ್ಲ್ಯಾನ್‌ ಮಾಡಿಕೊಂಡು, ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಕೃಷಿ ಇಲಾಖೆ : ಜಿಲ್ಲೆಯಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಪ್ರಗತಿಯಲ್ಲಿದ್ದು, ಜಿಲ್ಲಾದ್ಯಂತ ಒಟ್ಟು ಶೇ.18.20 ರಷ್ಟು‌ ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯ ಒಟ್ಟು 13 ತಾಲೂಕುಗಳಲ್ಲಿ ಈ ಬಾರಿ ಒಟ್ಟು 7,75,536 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಇದರಲ್ಲಿ ಸದ್ಯ 1,41,138 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದರು.

ಚೆಕ್‌ ಪೋಸ್ಟ್‌ ಸ್ಥಾಪಿಸಿ:
ಮೇವಿನ ಲಭ್ಯತೆ ಬಗ್ಗೆ ಅಂತಾರಾಜ್ಯ ಮೇವು ಸರಬರಾಜಾಗದಂತೆ ಚೆಕ್ ಪೋಸ್ಟ ಸ್ಥಾಪಿಸಿ, ಮುಂದಿನ 27 ವಾರಕ್ಕೆ ಸಾಕಾಗುವಷ್ಟು ಮೇವಿನ ಲಭ್ಯತೆ ಇಟ್ಟುಕೊಳ್ಳಬೇಕು ಎಂದರು. ಮಿನಿ ಕಿಟ್ಸ್ ಬೇಡಿಕೆ ಮೇವು ಬೆಳೆಯುವವರಿಗೆ ಅನುಕೂಲಕ್ಕಾಗಿ ಮಿನಿ ಕಿಟ್ಸ್ ಒದಗಿಸಿ, ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರಿಗೆ ಸಚಿವರು ಸೂಚಿಸಿದರು. ಡ್ರೈ ಗ್ರೇಪ್ಸ್ , ಗ್ರೇಪ್ಸ ಎರಡಕ್ಕೂ ಜಿಐ ಟ್ಯಾಗ್‌ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಅಧಿಕಾರಿಗಳು ಆರಂಭಿಸಬೇಕು ಎಂದರು.
ಸಭೆಯಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ,‌ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ ಜಿಲ್ಲಾಧಿಕಾರಿ ಡಾ. ಆನಂದ ಕೆ., ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ರಿಷಿ ಆನಂದ, ಎಸ್‌‌ಪಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share this