ಕ್ರಿಕೆಟ್ ಒಗ್ಗಟ್ಟು ಮತ್ತು ಕ್ರೀಡಾ ಮನೋಭಾವ ಬೆಳೆಸುತ್ತದೆ: ಸುನೀಲಗೌಡ ಪಾಟೀಲ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 24:
ಕ್ರಿಕೆಟ್ ಕ್ರೀಡೆಯು ತಂಡವಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ಹಾಗೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ಬಬಲೇಶ್ವರ ಪಟ್ಟಣದಲ್ಲಿ ದಿ. ಬಿ.ಎಂ. ಪಾಟೀಲ ಸ್ಮರಣಾರ್ಥ ಆಯೋಜಿಸಲಾದ ಬಬಲೇಶ್ವರ ಪ್ರೀಮಿಯರ್ ಲೀಗ್ (ಬಿಪಿಎಲ್) ಸೀಸನ್-2 ಕ್ರಿಕೆಟ್ ಟೂರ್ನಾಮೆಂಟ್ ಅನ್ನು ಮಂಗಳವಾರ ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದಿ. ಬಿ.ಎಂ. ಪಾಟೀಲ ಅವರು ಶಿಕ್ಷಣ ಪ್ರೇಮಿಯಾಗಿದ್ದು, ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರೆಯುವಂತೆ ಬಿ.ಎಲ್.ಡಿ.ಇ. ಶಿಕ್ಷಣ ಸಂಸ್ಥೆಯ ಮೂಲಕ ಅನೇಕ ಶಾಲೆಗಳು, ಕಾಲೇಜುಗಳು ಮತ್ತು ವಿವಿಧ ಕೋರ್ಸ್‌ಗಳನ್ನು ಆರಂಭಿಸಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಸಚಿವ ಎಂ.ಬಿ. ಪಾಟೀಲ ಅವರು ಜಲಕ್ರಾಂತಿಯ ಮೂಲಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಇಂದು ಕೆ.ಜಿ.ಯಿಂದ ಪಿ.ಜಿ.ವರೆಗೆ ಶಿಕ್ಷಣ ಸೌಲಭ್ಯ ಸ್ಥಳೀಯ ಮಟ್ಟದಲ್ಲೇ ಲಭ್ಯವಾಗುತ್ತಿದೆ ಎಂದು ತಿಳಿಸಿದರು.
ಕ್ರೀಡಾಕೂಟಗಳು ಪ್ರತಿಭಾವಂತ ಕ್ರೀಡಾಪಟುಗಳಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಉತ್ತಮ ವೇದಿಕೆ ಒದಗಿಸುತ್ತವೆ. ಕ್ರೀಡೆಯು ಗೆಲುವು-ಸೋಲನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಬೆಳೆಸುತ್ತದೆ. ಬಿ.ಎಲ್.ಡಿ.ಇ. ವತಿಯಿಂದ ಸ್ಥಾಪಿಸಲಾದ ಶ್ರೀ ಬಿ.ಎಂ. ಪಾಟೀಲ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್, ಟೆನಿಕಾಯ್ಟ್, ಟೇಬಲ್ ಟೆನಿಸ್ ಹಾಗೂ ಬ್ಯಾಡ್ಮಿಂಟನ್ ಸೇರಿದಂತೆ ವಿವಿಧ ಕ್ರೀಡೆಗಳ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಯುವಕರು ಶಿಕ್ಷಣ, ಕ್ರೀಡೆ, ಸಮಾಜಸೇವೆ ಮತ್ತು ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ. ಯುವಶಕ್ತಿ ಸಂಘಟಿತವಾಗಿ ಕಾರ್ಯನಿರ್ವಹಿಸಿದರೆ ಅಸಾಧ್ಯವಾದುದನ್ನೂ ಸಾಧಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬಿಜಾಪುರ ಬುಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಯುವ ಕ್ರಿಕೆಟರ್ ಅಕ್ಷಯ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಂತಯ್ಯ ಕರೆಗೋಳ ಸಾನ್ನಿಧ್ಯ ವಹಿಸಿದ್ದರು. ಪಿಎಸ್‌ಐ ಬಸನಗೌಡ ಬಿ.ಎಂ., ಪ್ರಕಾಶ ಜಾಲಗೇರಿ, ಮಹೇಶ್ ಮಾಳಿ, ಸಿದ್ದು ಬಿಳೂರ, ಬಾಪುರಾಯ ಜಂಗಮಶೆಟ್ಟಿ, ಮಹಾಂತೇಶ ಕೊಣ್ಣೂರ, ಜಾಫರ್ ನೀಡೋಣಿ, ರಾಣಪ್ಪ ಹೊಸಮನಿ, ಹನುಮಂತ ಬಡಚಿ, ಬಸವರಾಜ ಲೋಕುರಿ, ವಸಂತ ವಿಧಾತೆ, ರಾಜಗುರು ಉಳ್ಳಾಗಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this