ಪೋಲಿಯೋ ಹನಿ ಜೀವಮಾನದ ರಕ್ಷಕ-ಸಂತೋಷ ಬಂಡೆ

ಸಪ್ತಸಾಗರ ವಾರ್ತೆ,ಇಂಡಿ, ಜೂ. 27: ಪೋಲಿಯೋ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿ. ಲಸಿಕೆ, ಜಾಗೃತಿ ಮತ್ತು ಸ್ವಚ್ಛತೆಯ ಮೂಲಕ ನಾವು ಆರೋಗ್ಯಕರ ಸಮಾಜ ನಿರ್ಮಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶನಿವಾರ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡ ಪಲ್ಸ್ ಪೋಲಿಯೋ ಲಸಿಕೆಯ ಜಾಗೃತಿ ಜಾಥಾ ಉದ್ಧೇಶಿಸಿ ಅವರು ಮಾತನಾಡಿದರು.
ಕೇವಲ ಎರಡು ಹನಿ ಪೋಲಿಯೊ ಲಸಿಕೆ ಮಗುವಿಗೆ ಜೀವಮಾನದ ರಕ್ಷಣೆ ನೀಡುತ್ತದೆ. ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರವಾಗಿ ಕಾಪಾಡಿಕೊಳ್ಳಲು ನಿಯಮಿತವಾಗಿ ಲಸಿಕೆ ಹಾಕಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿ
ಎಂದು ಹೇಳಿದರು.
ಶಿಕ್ಷಕ ಶ್ರೀಧರ ಹಿಪ್ಪರಗಿ ಮಾತನಾಡಿ, ಪಲ್ಸ್ ಪೋಲಿಯೋ ಲಸಿಕೆಯು 0 ರಿಂದ 5 ವರ್ಷದೊಳಗಿನ ಪ್ರತಿ ಮಗುವಿಗೂ ಅತ್ಯಗತ್ಯವಾಗಿದೆ. ಪೋಲಿಯೊ ವೈರಸ್ ನರಮಂಡಲದ ಮೇಲೆ ದಾಳಿ ಮಾಡಿ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ಲಸಿಕೆ ನೀಡುವುದೊಂದೇ ಇದನ್ನು ತಡೆಯುವ ಏಕೈಕ ಮಾರ್ಗವಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕರಾದ ಎಸ್.ಬಿ. ಕೋಳಿ, ಕೆ. ಐ. ಮಕಾನದಾರ ಹಾಗೂ ಶಾಲೆಯ ಎಲ್ಲ ಶಿಕ್ಷಕರು, ತಾಂಬಾ ಎ ಎನ್ ಎಂ ಎಸ್ ಎಸ್ ಹೊನ್ನಮೊರೆ, ಆಶಾ ಕಾರ್ಯಕರ್ತೆಯರಾದ ಸುಜಾತಾ ಚಾಂದಕವತೆ, ಇಂದುಮತಿ ಹಳ್ಳದಮನಿ, ಎಸ್.ಎನ್. ಬೇನೂರ, ಎಸ್.ಆರ್. ಹರವಾಳ ಸೇರಿದಂತೆ ಮಕ್ಕಳು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು.

Share this