ಹಿರಿಯರ ಮೇಲಿನ ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ: ತಜ್ಞರ ಅಭಿಮತ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 30:
ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ತಡೆಗೆ ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆ, ಗೌರವ ಮತ್ತು ಸೌಹಾರ್ದಯುತ ವಾತಾವರಣ ನಿರ್ಮಾಣ ಅತ್ಯಗತ್ಯ ಎಂದು ತಜ್ಞರು ಅಭಿಪ್ರಾಯಪಟ್ಟರು.
ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹಿರಿಯ ನಾಗರಿಕರ ವೈದ್ಯಕೀಯ ವಿಭಾಗದ ವತಿಯಿಂದ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ತಡೆ ಮತ್ತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಜಗದೀಶ ಕೆ., ದೌರ್ಜನ್ಯಕ್ಕೆ ಒಳಗಾದ ಹಿರಿಯರಿಗೆ ಸರ್ಕಾರದಿಂದ ಲಭ್ಯವಿರುವ ವಿವಿಧ ಸೌಲಭ್ಯಗಳು ಹಾಗೂ ನೆರವು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಹೊಸ ತಲೆಮಾರಿನೊಂದಿಗೆ ಹೊಂದಾಣಿಕೆ ಬೆಳೆಸಿಕೊಳ್ಳುವುದು, ಮಕ್ಕಳ ಸಣ್ಣಪುಟ್ಟ ತಪ್ಪುಗಳನ್ನು ಕ್ಷಮಿಸುವ ಮನೋಭಾವ ಹೊಂದುವುದು ಹಾಗೂ ಕುಟುಂಬದಲ್ಲಿ ಸಾಮರಸ್ಯ ಕಾಪಾಡುವುದು ಅಗತ್ಯ ಎಂದು ಸಲಹೆ ನೀಡಿದರು.
ಬಿ.ಎಲ್.ಡಿ.ಇ ಕಾನೂನು ಶಾಲೆಯ ಪ್ರಾಚಾರ್ಯ ಡಾ. ರಘುವೀರ ಕುಲಕರ್ಣಿ ಮಾತನಾಡಿ, ಹಿರಿಯ ನಾಗರಿಕರ ಹಕ್ಕುಗಳು ಹಾಗೂ ಅವರ ರಕ್ಷಣೆಗೆ ಜಾರಿಯಲ್ಲಿರುವ ಕಾನೂನುಗಳ ಕುರಿತು ವಿವರಿಸಿದರು. ಇಚ್ಛಾಪತ್ರವನ್ನು ಸೂಕ್ತವಾಗಿ ರಚಿಸಿ ಸುರಕ್ಷಿತವಾಗಿ ಇಡಬೇಕು ಹಾಗೂ ಜೀವಿತಾವಧಿಯಲ್ಲಿಯೇ ಆಸ್ತಿಯನ್ನು ಮಕ್ಕಳ ಹೆಸರಿಗೆ ವರ್ಗಾಯಿಸದಿರುವುದು ಒಳಿತು ಎಂದು ಹೇಳಿದರು.
ವೈದ್ಯಕೀಯ ಅಧೀಕ್ಷಕ ಡಾ. ಸಂಜೀವ ಬೆಂಟೂರ, ಹಿರಿಯ ನಾಗರಿಕರಿಗೆ ಆಸ್ಪತ್ರೆಯಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ವೈದ್ಯಕೀಯ ಹಾಗೂ ಸಮಾಲೋಚನಾ ಸೇವೆಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಹಿರಿಯ ನಾಗರಿಕರ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಆನಂದ ಪಿ. ಅಂಬಲಿ, ಹಿರಿಯರ ಮೇಲಿನ ದೌರ್ಜನ್ಯವು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಿಳಿಸಿ, ದೌರ್ಜನ್ಯಕ್ಕೆ ಒಳಗಾದವರಿಗೆ ಚಿಕಿತ್ಸೆ, ಮಾನಸಿಕ ಆರೋಗ್ಯ ಸಲಹೆ ಹಾಗೂ ಅಗತ್ಯ ಮಾರ್ಗದರ್ಶನವನ್ನು ನಿರಂತರವಾಗಿ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ನಾಗರಿಕರು, ದೌರ್ಜನ್ಯಕ್ಕೆ ಒಳಗಾದವರಿಗೆ ನೆರವಾಗುವ ವಿಶೇಷ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿದರು. ಹಿರಿಯರು ಮೊಮ್ಮಕ್ಕಳೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿಕೊಳ್ಳುವುದು, ಕುಟುಂಬದ ದೈನಂದಿನ ಚಟುವಟಿಕೆಗಳಲ್ಲಿ ಸಹಕರಿಸುವುದು ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಸಾಮರಸ್ಯ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಕುರಿತು ನಡೆದ ಪೋಸ್ಟರ್ ಸ್ಪರ್ಧೆಯಲ್ಲಿ ವಿಜೇತರಾದ ಎಂ.ಕೆ. ಹಿರ್ಯಾಳ, ಅನುಪಮಾ ಸಿನ್ಹಾ, ಅಂಜಲಿ ವರ್ಮಾ ಹಾಗೂ ದಾನಮ್ಮ ಅರಳಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು, ವೈದ್ಯರು, ಬೋಧಕ ವರ್ಗದ ಸದಸ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Share this