ಸಪ್ತಸಾಗರ ವಾರ್ತೆ,ಬೆಂಗಳೂರು, ಜು. 3: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಪೂರ್ಣಗೊಂಡಿದ್ದು, ಈ ಅವಧಿಯಲ್ಲಿ ಆಡಳಿತ, ಮೂಲಸೌಕರ್ಯ, ರೈತ ಕಲ್ಯಾಣ, ಉದ್ಯೋಗ, ಶಿಕ್ಷಣ, ಕಾನೂನು ಸುವ್ಯವಸ್ಥೆ ಹಾಗೂ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ.
ಪ್ರಮುಖವಾಗಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, 72 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆರು ತಿಂಗಳ ಗಡುವು, 2,500 ಚದರ ಅಡಿವರೆಗಿನ ಮನೆಗಳಿಗೆ ಓಸಿ ವಿನಾಯಿತಿಯೊಂದಿಗೆ ಶಾಶ್ವತ ವಿದ್ಯುತ್ ಸಂಪರ್ಕ, ‘ಬಿ’ ಖಾತೆಯಿಂದ ‘ಎ’ ಖಾತೆಗೆ ಪರಿವರ್ತನೆ, ಬೆಂಗಳೂರಿನ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು ₹2,000 ಕೋಟಿ ಯೋಜನೆ ಹಾಗೂ ಖಾಸಗಿ ವಲಯದ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆಗೆ ತೀರ್ಮಾನ ಕೈಗೊಳ್ಳಲಾಗಿದೆ.
ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಲು ‘ಪ್ರಜಾಸೇವೆ’ ಸಚಿವಾಲಯ ರಚನೆ, ಸರ್ಕಾರಿ ಕಚೇರಿಗಳಲ್ಲಿ ಜಿಪಿಎಸ್ ಆಧಾರಿತ ಹಾಜರಾತಿ ವ್ಯವಸ್ಥೆ, ಭ್ರಷ್ಟಾಚಾರ ದೂರುಗಳಿಗೆ ಸಹಾಯವಾಣಿ, ರೌಡಿಗಳ ನಿಯಂತ್ರಣಕ್ಕೆ ಜಿಲ್ಲಾವಾರು ವಿಶೇಷ ಪಡೆ ಹಾಗೂ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ರೈತರ ಹಿತದೃಷ್ಟಿಯಿಂದ ಬಿತ್ತನೆ ಬೀಜ ಮತ್ತು ಗೊಬ್ಬರ ಪೂರೈಕೆ, ಮಾವು ಬೆಳೆಗಾರರಿಗೆ ಪ್ರೋತ್ಸಾಹಧನ ಮುಂದುವರಿಕೆ, ಬರ ನಿರ್ವಹಣೆಗೆ ಪೂರ್ವಸಿದ್ಧತೆ, ತುಂಗಭದ್ರಾ ಅಣೆಕಟ್ಟಿನ ಸ್ಪಿಲ್ ಗೇಟ್ ಉದ್ಘಾಟನೆ ಹಾಗೂ ಹೂಳು ತೆರವು ಯೋಜನೆಗೆ ಕೇಂದ್ರದ ಸಹಕಾರ ಕೋರಲಾಗಿದೆ. ಮೇಕೆದಾಟು ಯೋಜನೆಗೆ ಸಂಬಂಧಿಸಿದ ಸಮೀಕ್ಷೆ ಮತ್ತು ಮಣ್ಣು ಪರೀಕ್ಷೆಗೆ ಮುಂದಿನ ಹಂತದ ಅನುಮತಿ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ.
ಬೆಂಗಳೂರು ಅಭಿವೃದ್ಧಿಯ ಭಾಗವಾಗಿ ಹೆಬ್ಬಾಳ ಸುರಂಗ ರಸ್ತೆ, ಕೆಂಪೇಗೌಡ ಬಡಾವಣೆಯ ಎಸ್.ಎಂ. ಕೃಷ್ಣ ರಸ್ತೆ ಉದ್ಘಾಟನೆ, 15 ಲಕ್ಷ ಸಸಿ ನೆಡುವ ಅಭಿಯಾನ ಹಾಗೂ ಭೂಮಿ ನೀಡಿದ ರೈತರಿಗೆ ಗೌರವ ಸಲ್ಲಿಸುವ ‘ವಾಲ್ ಆಫ್ ಗ್ರ್ಯಾಟಿಟ್ಯೂಡ್’ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ.
ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿವಿಧ ಕೇಂದ್ರ ಸಚಿವರನ್ನು ಭೇಟಿ ಮಾಡಿ ನೀರಾವರಿ, ಮೆಟ್ರೋ, ಆರ್ಆರ್ಟಿಎಸ್ ಸೇರಿದಂತೆ ಹಲವು ಯೋಜನೆಗಳಿಗೆ ವಿಶೇಷ ಅನುದಾನ ಮತ್ತು ಅನುಮತಿಗಳ ಕುರಿತು ಚರ್ಚಿಸಲಾಗಿದೆ. ದೆಹಲಿಯಲ್ಲಿರುವ ರಾಜ್ಯದ ಹಿರಿಯ ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳ ಸಭೆ ನಡೆಸಿ ರಾಜ್ಯ ಅಭಿವೃದ್ಧಿಗೆ ಸಹಕಾರ ಕೋರಲಾಗಿದೆ.
ಇದರ ಜೊತೆಗೆ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಸಮಿತಿಗಳ ರಚನೆ, ನೂತನ ಸಿಎಸ್ಆರ್ ನೀತಿ, 2028ರೊಳಗೆ ನಶೆಮುಕ್ತ ಕರ್ನಾಟಕ ನಿರ್ಮಾಣ, ಡ್ರಗ್ಸ್ ಜಾಲ ನಿಯಂತ್ರಣಕ್ಕೆ ಬಹುಮಾನ ಯೋಜನೆ, ಸಾರ್ವಜನಿಕ ಯೋಜನೆಗಳಿಗಾಗಿ ಭೂಮಿ ನೀಡಿದ ರೈತರಿಗೆ ಗೌರವ, ಬಡವರಿಗೆ ನಿವೇಶನದ ಬದಲು ಮನೆ ನಿರ್ಮಿಸಿ ನೀಡುವ ಯೋಜನೆ ಸೇರಿದಂತೆ ಹಲವು ಆಡಳಿತಾತ್ಮಕ ಕ್ರಮಗಳನ್ನು ಸರ್ಕಾರ ಘೋಷಿಸಿದೆ.
ಒಟ್ಟಾರೆ, ಮೊದಲ 30 ದಿನಗಳಲ್ಲಿ ಆಡಳಿತ ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿ, ರೈತ ಕಲ್ಯಾಣ, ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಸೇವೆಗಳ ಬಲವರ್ಧನೆಗೆ ಒತ್ತು ನೀಡುವ ಹಲವು ಮಹತ್ವದ ನಿರ್ಧಾರಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಕೈಗೊಂಡಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರದ ಮೊದಲ 30 ದಿನ: ಪ್ರಮುಖ ನಿರ್ಧಾರಗಳ ಸರಣಿ


