ಸಪ್ತಸಾಗರ ವಾರ್ತೆ,ವಿಜಯಪುರ, ಜು.11: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ, ಖಾಯಂ ನಿವಾಸಿ ಪ್ರಮಾಣ ಪತ್ರ (ಪಿಆರ್‌ಸಿ) ವಿತರಣೆಯಲ್ಲಿ ಸರ್ಕಾರ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಸ್ವಾಮಿ ವಿವೇಕಾನಂದ ಸೇನೆ ರಾಜ್ಯಾಧ್ಯಕ್ಷ ರಾಘವ ಅಣ್ಣಿಗೇರಿ ಆಗ್ರಹಿಸಿದ್ದಾರೆ.
ಅವರು ಪತ್ರಿಕಾ ಪ್ರಕಟಣೆಯಲ್ಲಿ, ಪಿಆರ್‌ಸಿ ಪಡೆಯಲು ಅರ್ಜಿ ಸಲ್ಲಿಸುವವರನ್ನು ಕರ್ನಾಟಕ ಅಥವಾ ಭಾರತದ ಕಾನೂನುಬದ್ಧ ನಿವಾಸಿಗಳೇ ಅಥವಾ ಅಕ್ರಮ ವಲಸಿಗರೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಿ ಮಾತ್ರ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರವು ಎಸ್‌ಐಆರ್ ಪ್ರಕ್ರಿಯೆಗೆ ನೆರವಾಗುವ ಉದ್ದೇಶದಿಂದ ಪಿಆರ್‌ಸಿ ನೀಡಲು ವ್ಯವಸ್ಥೆ ರೂಪಿಸಿರುವುದಾಗಿ ವರದಿಯಾಗಿದೆ. ರಾಜಕೀಯ ಒತ್ತಡಕ್ಕೆ ಮಣಿದು ಅಕ್ರಮವಾಗಿ ಭಾರತಕ್ಕೆ ಬಂದಿರುವ ಬಾಂಗ್ಲಾದೇಶ, ಪಾಕಿಸ್ತಾನ ಅಥವಾ ಇತರ ದೇಶಗಳ ವಲಸಿಗರಿಗೆ ಖಾಯಂ ನಿವಾಸಿ ಪ್ರಮಾಣ ಪತ್ರ ನೀಡಿದರೆ, ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮತದಾರರ ಪಟ್ಟಿಯ ಶುದ್ಧತೆ ಹಾಗೂ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಪಿಆರ್‌ಸಿ ವಿತರಣೆಯಲ್ಲಿ ಯಾವುದೇ ನಿರ್ಲಕ್ಷ್ಯ ಅಥವಾ ಅಕ್ರಮಕ್ಕೆ ಅವಕಾಶ ನೀಡಬಾರದು ಎಂದು ಸ್ವಾಮಿ ವಿವೇಕಾನಂದ ಸೇನೆ ರಾಜ್ಯಾಧ್ಯಕ್ಷ ಅಣ್ಣಿಗೇರಿ ಹೇಳಿದ್ದಾರೆ.
ಅಕ್ರಮ ವಲಸಿಗರಿಗೆ ಪಿಆರ್‌ಸಿ ನೀಡದಂತೆ ಸ್ವಾಮಿ ವಿವೇಕಾನಂದ ಸೇನೆ ಆಗ್ರಹ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ


