ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ಪ್ರಶ್ನೆ ಅನಗತ್ಯ: ರಾಜ್ಯ ಸರ್ಕಾರದ ವಿರುದ್ಧ ಶ್ರೀಹರ್ಷಗೌಡ ಪಾಟೀಲ ವಾಗ್ದಾಳಿ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 12:
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಪಥಸಂಚಲನವು ಶಿಸ್ತು, ಸೇವೆ ಹಾಗೂ ದೇಶಾಭಿಮಾನದ ಪ್ರತೀಕವಾಗಿದ್ದು, ಅದಕ್ಕೆ ಅನುಮತಿ ಹಾಗೂ ನೋಂದಣಿ ಕಡ್ಡಾಯಗೊಳಿಸುವ ಮೂಲಕ ರಾಜ್ಯ ಸರ್ಕಾರ ಬೇಜವಾಬ್ದಾರಿತನದಿಂದ ವರ್ತಿಸುತ್ತಿದೆ ಎಂದು ಸಹಕಾರ ಭಾರತಿ ವಿಜಯಪುರ ಜಿಲ್ಲಾಧ್ಯಕ್ಷ ಶ್ರೀಹರ್ಷಗೌಡ ಪಾಟೀಲ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆರ್‌ಎಸ್‌ಎಸ್‌ ಪಥಸಂಚಲನವು ಶಿಸ್ತುಬದ್ಧ ಮೆರವಣಿಗೆ, ದೇಶಭಕ್ತಿ ಮತ್ತು ರಾಷ್ಟ್ರಸೇವೆಯ ಮನೋಭಾವ ಬೆಳೆಸುವ ಕಾರ್ಯಕ್ರಮವಾಗಿದೆ. ಯುವಜನರನ್ನು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ ಇಂತಹ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯಗೊಳಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
“ರಾಷ್ಟ್ರ ನಿರ್ಮಾಣಕ್ಕಾಗಿ ದುಡಿಯುವುದೇ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ. ಭಾರತೀಯ ಸಂವಿಧಾನವೂ ಇದನ್ನೇ ಪ್ರತಿಪಾದಿಸುತ್ತದೆ. ಆ ಕರ್ತವ್ಯವನ್ನು ಆರ್‌ಎಸ್‌ಎಸ್‌ ನಿರ್ವಹಿಸುತ್ತಿದೆ. ಇಂತಹ ಕಾರ್ಯಗಳಿಗೆ ಸರ್ಕಾರ ಅನಗತ್ಯ ನಿರ್ಬಂಧ ಹೇರಬಾರದು” ಎಂದು ಅವರು ಹೇಳಿದರು.
ದೇಶದ ವಿವಿಧ ಭಾಗಗಳಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ವಿವಿಧ ಸಮುದಾಯಗಳ ಜನರು, ಮುಸ್ಲಿಂ ಬಾಂಧವರೂ ಸಹ ಪುಷ್ಪವೃಷ್ಟಿ ಮೂಲಕ ಸ್ವಾಗತಿಸಿರುವ ಉದಾಹರಣೆಗಳಿವೆ ಎಂದು ಉಲ್ಲೇಖಿಸಿದ ಅವರು, ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರು ಪಥಸಂಚಲನದ ಕುರಿತು ಅನಗತ್ಯ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಮರೆಮಾಚಲು ಆರ್‌ಎಸ್‌ಎಸ್‌ ನೋಂದಣಿ ಹಾಗೂ ಪಥಸಂಚಲನದ ವಿಷಯವನ್ನು ಮುಂದಿಟ್ಟುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಅವರು, ಸಂಘ ಪರಿವಾರವನ್ನು ಪ್ರಶ್ನಿಸುವ ಬದಲು ರಾಜ್ಯ ಸರ್ಕಾರ ಮೊದಲು ಕಾನೂನು ಸುವ್ಯವಸ್ಥೆ ಸುಧಾರಣೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

Share this