ಕನಸಿನ ಮನೆಗೆ ‘ಎಂ. ಬಿ. ಪಾಟೀಲ ನಿಲಯ’ ಹೆಸರು: ಕೃತಜ್ಞತೆಯ ಮೂಲಕ ಗಮನ ಸೆಳೆದ ರೈತ ಕುಟುಂಬ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 12:
ಬರದ ನಾಡಿನಲ್ಲಿ ನೀರಾವರಿಯಿಂದ ಬದುಕು ಬದಲಾದ ಕೃತಜ್ಞತೆಯ ಸಂಕೇತವಾಗಿ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಗ್ರಾಮದ ಹಿರೇಮಠ ಅವಿಭಕ್ತ ಕುಟುಂಬ ತಮ್ಮ ನೂತನ ಮನೆಗೆ ‘ಶ್ರೀ ಎಂ. ಬಿ. ಪಾಟೀಲ ನಿಲಯ’ ಎಂದು ನಾಮಕರಣ ಮಾಡಿ ಗಮನ ಸೆಳೆದಿದೆ.
30 ಸದಸ್ಯರನ್ನು ಹೊಂದಿರುವ ಹಿರೇಮಠ ಕುಟುಂಬದ ಸಿದ್ದಯ್ಯ, ಸಾತಯ್ಯ, ಬಸಯ್ಯ ಹಾಗೂ ಮಲ್ಲಯ್ಯ ಸಹೋದರರು ವಿಜಯಪುರ ನಗರದ ಅಥಣಿ ರಸ್ತೆಯ ರಾಜಕುಮಾರ ಲೇಔಟ್‌ನ ಸುವರ್ಣನಗರದಲ್ಲಿ ಬೃಹತ್ ಮನೆ ನಿರ್ಮಿಸಿದ್ದು, ಭಾನುವಾರ ವಾಸ್ತುಶಾಂತಿ ಹಾಗೂ ಗೃಹಪ್ರವೇಶವನ್ನು ಅದ್ಧೂರಿಯಾಗಿ ನೆರವೇರಿಸಿದರು. ಈ ಸಂದರ್ಭದಲ್ಲಿ ಗಣ್ಯರನ್ನು ಆಹ್ವಾನಿಸಿ ಸತ್ಕರಿಸಿದರು.
ಹಿರೇಮಠ ಸಹೋದರರು ಮಾತನಾಡಿ, “ನಮ್ಮ ಕುಟುಂಬಕ್ಕೆ ಸೇರಿದ 40 ಎಕರೆ ಒಣಭೂಮಿಗೆ 2013–18ರ ಅವಧಿಯಲ್ಲಿ ಜಾರಿಗೆ ಬಂದ ನೀರಾವರಿ ಯೋಜನೆಗಳಿಂದ ನೀರು ದೊರೆಯಿತು. ಬಳಿಕ ದ್ರಾಕ್ಷಿ ಹಾಗೂ ಒಣದ್ರಾಕ್ಷಿ (ಮನುಕ) ಬೆಳೆಯ ಮೂಲಕ ವರ್ಷಕ್ಕೆ 100 ಟನ್ ಉತ್ಪಾದನೆ ಮಾಡುತ್ತಿದ್ದೇವೆ. ಎರಡು ವರ್ಷಗಳ ಹಿಂದೆ ಸುಮಾರು ₹1.50 ಕೋಟಿ ಇದ್ದ ಆದಾಯ ಈಗ ₹3.50ರಿಂದ ₹4 ಕೋಟಿ ತಲುಪಿದೆ. ನಮ್ಮ ಬದುಕು ಹಸನಾಗಲು ಕಾರಣರಾದ ಎಂ. ಬಿ. ಪಾಟೀಲ ಅವರ ಹೆಸರನ್ನು ನಮ್ಮ ಕನಸಿನ ಮನೆಗೆ ಇಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದೇವೆ” ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ, “ಅನ್ನದಾತನ ಕನಸಿನ ಮನೆಯ ಮೇಲೆ ನನ್ನ ಹೆಸರಿಡುವುದು ನನಗೆ ದೊರೆತ ಅಪೂರ್ವ ಗೌರವ. ಇದು ನನ್ನ ಹೆಸರಿನ ಗೌರವವಲ್ಲ, ರೈತರ ಪ್ರೀತಿ, ವಿಶ್ವಾಸ ಮತ್ತು ಕೃತಜ್ಞತೆಯ ಪ್ರತೀಕವಾಗಿದೆ. ರೈತರ ಈ ಅಭಿಮಾನ ನನಗೆ ಇನ್ನಷ್ಟು ಜವಾಬ್ದಾರಿಯಿಂದ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ರೈತರ ಬದುಕು ಇನ್ನಷ್ಟು ಸಮೃದ್ಧವಾಗುವವರೆಗೆ ನನ್ನ ಸೇವೆಯ ಪಯಣ ನಿರಂತರವಾಗಿರಲಿದೆ” ಎಂದು ತಿಳಿಸಿದ್ದಾರೆ.
ಗೃಹಪ್ರವೇಶ ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ, ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಎಂ. ಪಾಟೀಲ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಡಾ. ಮಹಾಂತೇಶ ಬಿರಾದಾರ, ಎಕ್ಸಿಕ್ಯೂಟಿವ್ ಎಂಜಿನಿಯರ್ ರಾಜಕುಮಾರ ಸಿದ್ರಾಮ ಕುಮಾನಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಹಿರೇಮಠ ಕುಟುಂಬಕ್ಕೆ ಶುಭ ಕೋರಿದರು.
ನಾಯಕರನ್ನು ಟೀಕಿಸುವ ಪ್ರವೃತ್ತಿ ಹೆಚ್ಚಾಗಿರುವ ಇಂದಿನ ಸಂದರ್ಭದಲ್ಲಿ, ತಮ್ಮ ಬದುಕಿಗೆ ಬದಲಾವಣೆ ತಂದ ನಾಯಕರ ಹೆಸರನ್ನು ಹೊಸ ಮನೆಗೆ ನಾಮಕರಣ ಮಾಡುವ ಮೂಲಕ ಸೋಮದೇವರಹಟ್ಟಿಯ ಹಿರೇಮಠ ಕುಟುಂಬ ಕೃತಜ್ಞತೆಗೆ ಹೊಸ ಅರ್ಥ ನೀಡಿದೆ.

Share this