ಎಸ್‌ಸಿ ಮಹಿಳೆಗೆ ಮೀಸಲಾತಿ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ ಮನವಿ

ಸಪ್ತಸಾಗರ ವಾರ್ತೆ,ವಿಜಯಪುರ, ಜು.13: ನಾಗರಿಕ ವಿಧಾನಸಭಾ ಕ್ಷೇತ್ರದ ಅಲಿಯಾಬಾದ್ ಗ್ರಾಮ ಪಂಚಾಯತ್ ವಾರ್ಡ್ ಸಂಖ್ಯೆ-2ರ ಮೀಸಲಾತಿಯನ್ನು ನಿಯಮಾನುಸಾರ ಮರು ಪರಿಶೀಲಿಸಿ, ಪರಿಶಿಷ್ಟ ಜಾತಿ (ಎಸ್‌ಸಿ) ಮಹಿಳೆಗೆ ಮೀಸಲಾತಿ ಕಲ್ಪಿಸುವಂತೆ ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ (ರಿ.) ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಜಿಲ್ಲಾ ಅಧ್ಯಕ್ಷ ನಾಗರಾಜ ಕಬಾಡೆ ಅವರ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ, ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ-2 ಎಸ್‌ಸಿ ಪುರುಷರಿಗೆ ಮೀಸಲಾಗಿತ್ತು. ಪ್ರಸ್ತುತ ಮೀಸಲಾತಿ ಸರಣಿಯ ನಿಯಮಗಳ ಪ್ರಕಾರ ಈ ಬಾರಿ ಸದರಿ ವಾರ್ಡ್ ಎಸ್‌ಸಿ ಮಹಿಳೆಗೆ ಮೀಸಲಾಗಬೇಕಾಗಿತ್ತು. ಆದರೆ ಪ್ರಕಟಿತ ಮೀಸಲಾತಿಯಲ್ಲಿ ನಿಯಮ ಪಾಲನೆಯಾಗಿಲ್ಲ ಎಂಬ ಅನುಮಾನವಿದ್ದು, ಇದರಿಂದ ಪರಿಶಿಷ್ಟ ಜಾತಿಯ ಮಹಿಳೆಯರಿಗೆ ದೊರೆಯಬೇಕಾದ ಸಂವಿಧಾನಬದ್ಧ ಅವಕಾಶಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಆದ್ದರಿಂದ ಸಂಬಂಧಪಟ್ಟ ದಾಖಲೆಗಳು ಹಾಗೂ ಮೀಸಲಾತಿ ಸರಣಿಯನ್ನು ಸಮಗ್ರವಾಗಿ ಪರಿಶೀಲಿಸಿ, ಯಾವುದೇ ಲೋಪದೋಷಗಳಿದ್ದಲ್ಲಿ ತಕ್ಷಣ ಸರಿಪಡಿಸಿ, ವಾರ್ಡ್ ಸಂಖ್ಯೆ-2ನ್ನು ನಿಯಮಾನುಸಾರ ಎಸ್‌ಸಿ ಮಹಿಳೆಗೆ ಮೀಸಲಾತಿ ಘೋಷಿಸುವಂತೆ ಸಂಘಟನೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಅಪ್ಪುರಾಜ್ ನಿಮಾದಾರ, ರಾಜ್ಯ ಉಪಾಧ್ಯಕ್ಷ ವಿಜಯಕುಮಾರ ನಿಮಾದಾರ, ಜಿಲ್ಲಾ ಗೌರವಾಧ್ಯಕ್ಷ ಕಿರಣಕುಮಾರ ಅಲಿಯಾಬಾದ್, ರಾಜ್ಯ ಮಹಿಳಾ ಅಧ್ಯಕ್ಷೆ ನೀಲಾಂಬಿಕಾ ಕಟ್ಟಿಮನಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಶಿಲ್ಪಾ ಮೇತ್ರಿ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಹಕ್ ಇನಾಮದಾರ, ನಗರ ಘಟಕದ ಅಧ್ಯಕ್ಷ ರವಿಚಂದ್ರ ಶಹಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕಟ್ಟಿಮನಿ, ಸಾಹೇಬಲಾಲ ಹಿಪ್ಪರಗಿ, ಎಂ.ಎಂ. ಖಾನ್, ಸಂತೋಷ ಕಟ್ಟಿಮನಿ, ಹುಸೇನ ಹಿಪ್ಪರಗಿ, ರಾಘವೇಂದ್ರ ಕಾಸೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this