ಸಪ್ತಸಾಗರ ವಾರ್ತೆ,ಬೆಂಗಳೂರು, ಜು. 14: ಬೆಂಗಳೂರಿನಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮಂಗಳವಾರ ನಡೆದ ಗೂಗಲ್ ಐ/ಓ ಕನೆಕ್ಟ್ ಇಂಡಿಯಾ 2026 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ‘ಎಐ-ನೇಟಿವ್’ ರಾಜ್ಯವನ್ನಾಗಿ ರೂಪಿಸುವ ಗುರಿ ಹೊಂದಿದ್ದು, ಆಡಳಿತ ಹಾಗೂ ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ಎಐ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಪ್ರಾಯೋಜಿತ ಎಐ ವಿಶ್ವವಿದ್ಯಾಲಯದ ಮೂಲಕ ಎಐ ಪ್ರತಿಭೆಗಳನ್ನು ಬೆಳೆಸುವುದು, ಉನ್ನತ ಮಟ್ಟದ ಸಂಶೋಧನೆಗೆ ಉತ್ತೇಜನ ನೀಡುವುದು ಹಾಗೂ ಶಿಕ್ಷಣ ಸಂಸ್ಥೆಗಳು, ಕೈಗಾರಿಕೆ ಮತ್ತು ಸರ್ಕಾರದ ನಡುವೆ ಸಹಯೋಗವನ್ನು ವೃದ್ಧಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಶಿಕ್ಷಣದಲ್ಲಿ ಎಐ ಆಧಾರಿತ ಬೋಧನೆ, ಆರೋಗ್ಯ ಕ್ಷೇತ್ರದಲ್ಲಿ ರೋಗಗಳ ಮುಂಚಿತ ಪತ್ತೆ ಹಾಗೂ ಉತ್ತಮ ಚಿಕಿತ್ಸಾ ನೆರವು, ಕೃಷಿಯಲ್ಲಿ ರೈತರಿಗೆ ಎಐ ಆಧಾರಿತ ಸಲಹಾ ಸೇವೆಗಳು, ಸರ್ಕಾರಿ ಸೇವೆಗಳಲ್ಲಿ ವೇಗ ಮತ್ತು ಪಾರದರ್ಶಕತೆ ಹಾಗೂ ಸಣ್ಣ ಉದ್ಯಮಗಳ ಸ್ಪರ್ಧಾತ್ಮಕತೆ ಹೆಚ್ಚಿಸಲು ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು ಎಂದು ವಿವರಿಸಿದರು.
ಬೆಂಗಳೂರು ವಿಶ್ವದ ಪ್ರಮುಖ ತಂತ್ರಜ್ಞಾನ ನಗರಗಳಲ್ಲಿ ಒಂದಾಗಿದ್ದು, ತಂತ್ರಜ್ಞಾನ ಇಲ್ಲಿನ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಇಂದು ಕೃತಕ ಬುದ್ಧಿಮತ್ತೆ ಮಾನವ ಸಾಮರ್ಥ್ಯವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕವು ಭಾರತದ ಸಾಫ್ಟ್ವೇರ್ ರಫ್ತಿನಲ್ಲಿ ಶೇ.40ರಷ್ಟು ಕೊಡುಗೆ ನೀಡುತ್ತಿದ್ದು, ಬೆಂಗಳೂರು 17 ಸಾವಿರಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳಿಗೆ ನೆಲೆಯಾಗಿದೆ. ಸಾವಿರಾರು ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಕರ್ನಾಟಕವನ್ನು ತಮ್ಮ ಕಾರ್ಯಾಚರಣೆಯ ಕೇಂದ್ರವಾಗಿ ಆಯ್ಕೆ ಮಾಡಿಕೊಂಡಿವೆ ಎಂದು ಹೇಳಿದರು.
ಗೂಗಲ್ ಕರ್ನಾಟಕದ ಅತ್ಯಂತ ಪ್ರಮುಖ ಪಾಲುದಾರವಾಗಿದ್ದು, ಭಾರತದಲ್ಲಿನ ಗೂಗಲ್ನ 18 ಸಾವಿರ ಸಿಬ್ಬಂದಿಯಲ್ಲಿ ಸುಮಾರು 12 ಸಾವಿರ ಮಂದಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ನಗರದ ತಾಂತ್ರಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಶಿವಕುಮಾರ್ ಹೇಳಿದರು.
ಎಐ ತಂತ್ರಜ್ಞಾನದ ನೆರವಿನಿಂದ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಸರ್ಕಾರ ಗೂಗಲ್ ಸೇರಿದಂತೆ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಕೈಜೋಡಿಸಿ ರಾಜ್ಯವನ್ನು ಜವಾಬ್ದಾರಿಯುತ ಎಐ ತಂತ್ರಜ್ಞಾನದ ಜಾಗತಿಕ ಕೇಂದ್ರವನ್ನಾಗಿ ರೂಪಿಸಲು ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಎಐ ವಿಶ್ವವಿದ್ಯಾಲಯ: ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ


