ಸಪ್ತಸಾಗರ ವಾರ್ತೆ,ವಿಜಯಪುರ, ಜು. 14:
ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಸ್ಮರಣಾರ್ಥ ರಾಯಣ್ಣ ಉತ್ಸವವನ್ನು ಆಗಸ್ಟ್ ತಿಂಗಳಲ್ಲಿ ವಿಜಯಪುರ ನಗರದ ದರಬಾರ ಪ್ರೌಢಶಾಲೆ ಮೈದಾನದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗುವುದು ಎಂದು ಹುಲಜಂತಿ ಪಟ್ಟದ ಮಹಾಳಿಂಗರಾಯ ಮಹಾರಾಯರು ತಿಳಿಸಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಇಂದಿನಿಂದಲೇ ಅಗತ್ಯ ಸಿದ್ಧತೆಗಳನ್ನು ಆರಂಭಿಸಲಾಗಿದ್ದು, ಸಮಾಜದ ಎಲ್ಲ ವರ್ಗಗಳ ಸಹಕಾರ ಅಗತ್ಯ ಎಂದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿ ಕಿತ್ತೂರ ಮಾತನಾಡಿ, ಆಗಸ್ಟ್ 15ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನದ ಜೊತೆಗೆ ದೇಶದ ಸ್ವಾತಂತ್ರ್ಯ ದಿನವೂ ಆಗಿರುವುದು ವಿಶೇಷ. ಈ ಪವಿತ್ರ ದಿನದಂದು ರಾಯಣ್ಣ ಉತ್ಸವ ಆಚರಿಸುವ ಮೂಲಕ ಅವರ ದೇಶಭಕ್ತಿ, ಶೌರ್ಯ ಮತ್ತು ಆದರ್ಶಗಳನ್ನು ಯುವಜನತೆಗೆ ತಲುಪಿಸುವ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಚಿಂತಕ ಮೋಹನ ಮೇಟಿ ಮಾತನಾಡಿ, ರಾಯಣ್ಣ ಉತ್ಸವಕ್ಕೆ ನಿರೀಕ್ಷೆಗೂ ಮೀರಿ ಜನರು ಆಗಮಿಸುವ ಸಾಧ್ಯತೆ ಇದೆ. ಈ ಹಿಂದೆ ಆಯೋಜಿಸಿದ್ದ ರಾಯಣ್ಣ ಬಾವುಟ ಕಾರ್ಯಕ್ರಮ ಯಶಸ್ವಿಯಾಗಿದ್ದಂತೆ, ಈ ಉತ್ಸವವನ್ನೂ ಅಚ್ಚುಕಟ್ಟಾಗಿ ನಡೆಸಬೇಕು ಎಂದು ಹೇಳಿದರು.
ಸಮಾಜ ಮುಖಂಡ ಸಂಗಮೇಶ ಓಲೇಕಾರ ಮಾತನಾಡಿ, ಉತ್ಸವದ ಸಂದೇಶವನ್ನು ಜಿಲ್ಲೆಯ ಪ್ರತಿಯೊಂದು ಹಳ್ಳಿಗೂ ತಲುಪಿಸಬೇಕು. ವಿವಿಧ ಸಮಾಜಗಳ ಮಠಾಧೀಶರ ನೇತೃತ್ವದಲ್ಲಿ ರಾಜ್ಯದ ಪ್ರಮುಖ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಸಮಾಜ ಮುಖಂಡರು ಹಾಗೂ ಉತ್ಸವದ ರೂವಾರಿಗಳಾದ ಪ್ರಕಾಶ ಜಾಲಗೇರಿ, ಗುರುನಾಥ ಮರಡಿ, ಬನ್ನೆಪ್ಪ ಜೋಗಿ, ರಾಹುಲ್ ಔರಂಗಾಬಾದ್, ರೇವಣಸಿದ್ದ ಗೋಡಕೆ, ವಿಕಾಸ ಜೋಗಿ, ವಿಠ್ಠಲ ನಾಯಕವಾಡಿ, ಗಣೇಶ ಹೊಸಟ್ಟಿ, ಮುತ್ತು ಕವಲಗಿ, ರವಿ ಚೌಡಿಹಾಳ, ಶಿವಾನಂದ ಹಿರೇಕುರುಬರ, ಬಂಗಾರೇಶ, ಶಿವು ಕನ್ನಾಳ, ಸುರೇಶ ಕೊಣ್ಣೂರು, ಶ್ರೀಶೈಲ ಶೇಗುಣಸಿ, ರಮೇಶ ಮಾಗಿ ಹಾಗೂ ಹನಮಂತ ತೇರದಾಳ ಅವರು ಉತ್ಸವದ ರೂಪುರೇಷೆಗಳು ಮತ್ತು ಸಿದ್ಧತೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಅರಕೇರಿ ಅಮೋಘಸಿದ್ದೇಶ್ವರ ದೇವಸ್ಥಾನದ ಧರ್ಮದರ್ಶಿ ಶ್ರೀ ಅಪ್ಪು ಒಡೆಯರ ಸಾನ್ನಿಧ್ಯ ವಹಿಸಿದ್ದರು.
ಪ್ರಕಾಶ ಜಾಲಗೇರಿ ಅವಿರೋಧ ಆಯ್ಕೆ
ಪೂರ್ವಭಾವಿ ಸಭೆಯಲ್ಲಿ ರಾಯಣ್ಣ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಯುವ ಮುಖಂಡ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರಕಾಶ ಜಾಲಗೇರಿ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಸಮಾಜದ ಯುವ ಮುಖಂಡರು ಭಾಗವಹಿಸಿದ್ದರು.


