ಯೋಜಿತ ಕುಟುಂಬ ಯೋಜನೆಯಿಂದ ಸುಂದರ ಭವಿಷ್ಯ: ಡಿಎಚ್‌ಒ ಡಾ. ಸಂಪತಕುಮಾರ ಗುಣಾರಿ

ಸಪ್ತಸಾಗರ ವಾರ್ತೆ ವಿಜಯಪುರ, ಜು. 14:
ಆರೋಗ್ಯಕರ ಸಮಯದಲ್ಲಿ ಗರ್ಭಧಾರಣೆ ಹಾಗೂ ಮಕ್ಕಳ ನಡುವೆ ಸೂಕ್ತ ಅಂತರ ಕಾಯ್ದುಕೊಳ್ಳುವ ಮೂಲಕ ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಉತ್ತಮಗೊಳಿಸಬಹುದು. ಯೋಜಿತ ಕುಟುಂಬದಿಂದ ಕುಟುಂಬದ ಸುಂದರ ಭವಿಷ್ಯ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಪತಕುಮಾರ ಗುಣಾರಿ ಹೇಳಿದರು.
ಜಿಲ್ಲಾ ಆಸ್ಪತ್ರೆ ಆವರಣದ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ತಾಯಿ ಮರಣ ಪ್ರಮಾಣ ಹಾಗೂ ಗರ್ಭಧಾರಣೆಗೆ ಸಂಬಂಧಿಸಿದ ತೊಂದರೆಗಳನ್ನು ತಡೆಗಟ್ಟುವುದೇ ಈ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶದ ಜನಸಂಖ್ಯೆ 33 ಕೋಟಿ ಇದ್ದು, ಪ್ರಸ್ತುತ 144 ಕೋಟಿಗೂ ಅಧಿಕವಾಗಿದೆ. ಭಾರತ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ದೇಶದ ಜನನ ದರ 1.94ಕ್ಕೆ ಕುಸಿದಿದ್ದು, ಭವಿಷ್ಯದಲ್ಲಿ ಜನಸಂಖ್ಯೆಯ ಅಸಮತೋಲನ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಮಾತನಾಡಿ, ವೃದ್ಧರ ಸಂಖ್ಯೆ ಹೆಚ್ಚುತ್ತಿದ್ದು, ದುಡಿಯುವ ಕೈಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ದೇಶದ ಆರ್ಥಿಕತೆಗೆ ಸವಾಲಾಗಲಿದೆ ಎಂದರು.
ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ವರಿ ಗೋಲಗೇರಿ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪಿಪಿಐಯುಸಿಡಿ, ಅಂತರ ಚುಚ್ಚುಮದ್ದು, ಇಂಪ್ಲಾಂಟ್ ರಾಡ್ ಅಳವಡಿಕೆ, ನಿರೋಧ ವಿತರಣೆ, ಮಹಿಳೆಯರಿಗೆ ಟ್ಯೂಬೆಕ್ಟಮಿ ಹಾಗೂ ಪುರುಷರ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಸೇರಿದಂತೆ ಶಾಶ್ವತ ಮತ್ತು ತಾತ್ಕಾಲಿಕ ಕುಟುಂಬ ಕಲ್ಯಾಣ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅರವಳಿಕೆ ತಜ್ಞ ಡಾ. ಸಜ್ಜನ ಮಾತನಾಡಿ, ದೇಶದಲ್ಲಿ ಯುವಜನರ ಸಂಖ್ಯೆ ಹೆಚ್ಚಿದ್ದರೂ ನಗರೀಕರಣ, ನಿರುದ್ಯೋಗ ಹಾಗೂ ಪರಿಸರ ಮಾಲಿನ್ಯದಂತಹ ಸವಾಲುಗಳು ಎದುರಾಗಿವೆ. ಜನಸಂಖ್ಯೆ ಈಗ ಕೇವಲ ನಿಯಂತ್ರಣದ ವಿಷಯವಲ್ಲ, ಸಮರ್ಪಕ ನಿರ್ವಹಣೆಯ ವಿಷಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಎಂ.ಬಿ. ಬಿರಾದಾರ, ತಾಲೂಕು ಆರೋಗ್ಯಾಧಿಕಾರಿ ಡಾ. ಕೆ.ಡಿ. ಗುಂಡಬಾವಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ, ಸುರೇಂದ್ರ ಮಾನಕರ, ಶಂಕರ ಚಲವಾದಿ, ರೇಖಾ ದಶವಂತ, ಮೋತಿಲಾಲ ಲಮಾಣಿ, ಎನ್.ಆರ್. ಬಾಗವಾನ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸಹಾಯಕ ಮಲೇರಿಯಾ ಅಧಿಕಾರಿ ವಿರುಪಾಕ್ಷ ಬಂದಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share this