ಸಪ್ತಸಾಗರ ವಾರ್ತೆ,ವಿಜಯಪುರ, ಜು.16:
2026ರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ನಿಗದಿತ ಅವಧಿಗೂ ಮುನ್ನವೇ ಶೇ.100ರಷ್ಟು ಪ್ರಗತಿ ಸಾಧಿಸಿದ ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಹಾಗೂ ಮತಗಟ್ಟೆ ಮೇಲ್ವಿಚಾರಕರನ್ನು ಗುರುವಾರ ನಗರದ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಮತದಾರರ ಪಟ್ಟಿ ಪರಿಷ್ಕರಣೆಯ ಅಂಗವಾಗಿ ಗಣತಿ ನಮೂನೆಗಳ ವಿತರಣೆ ಹಾಗೂ ಡಿಜಿಟೈಜೇಶನ್ ಕಾರ್ಯವನ್ನು ಸಮಯಕ್ಕಿಂತ ಮುಂಚಿತವಾಗಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಈ ಗೌರವ ಸಲ್ಲಿಸಲಾಯಿತು.
29-ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದ ಭಾಗ ಸಂಖ್ಯೆ 84ರ ಮತಗಟ್ಟೆ ಮಟ್ಟದ ಅಧಿಕಾರಿ ಎಚ್.ಎನ್. ಮೋಹಿತೆ ಹಾಗೂ ಮತಗಟ್ಟೆ ಮೇಲ್ವಿಚಾರಕಿ ಸುಜಾತಾ ಬಾಗಲಕೋಟ, ಭಾಗ ಸಂಖ್ಯೆ 204ರ ಮತಗಟ್ಟೆ ಅಧಿಕಾರಿ ಚಂದ್ರವ್ವ ತಂಬದ ಹಾಗೂ ಮೇಲ್ವಿಚಾರಕ ಶಕೆ.ಕೆ. ಅಸ್ಕಿ, ಭಾಗ ಸಂಖ್ಯೆ 212ರ ಮತಗಟ್ಟೆ ಅಧಿಕಾರಿ ಸುನೀತಾ ವಾಲೀಕಾರ ಹಾಗೂ ಮೇಲ್ವಿಚಾರಕ ಶಿವಪ್ಪ ಕಾಂಬಳೆ ಅವರನ್ನು ಸನ್ಮಾನಿಸಲಾಯಿತು.
ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಬಬಲೇಶ್ವರ ತಹಶೀಲ್ದಾರ್ ಶಾಂತಲಾ ಚಂದನ್ ಹಾಗೂ ತಿಕೋಟಾ ತಹಶೀಲ್ದಾರ್ ಸುರೇಶ ಚವಲರ್ ಅವರು ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಶ್ಲಾಘಿಸಿ ಸನ್ಮಾನ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಅವಧಿಗೆ ಮುನ್ನವೇ ಶೇ.100 ಸಾಧನೆ: ಬಬಲೇಶ್ವರದ ಮತಗಟ್ಟೆ ಅಧಿಕಾರಿಗಳಿಗೆ ಸನ್ಮಾನ


