ಯುವಕರಿಗೆ ವೃತ್ತಿಪರ ಕ್ರೀಡೆಗೆ ಪ್ರೋತ್ಸಾಹ: ಸುನೀಲಗೌಡ ಪಾಟೀಲ

ಬಬಲೇಶ್ವರ ಪ್ರೀಮಿಯರ್ ಲೀಗ್-2 ಸಮಾರೋಪ; ಗೇಮ್ ಚೇಂಜರ್ ಜೈನಾಪುರ ಚಾಂಪಿಯನ್

ಸಪ್ತಸಾಗರ ವಾರ್ತೆ,ವಿಜಯಪುರ, ಜು. 16:
ಯುವಕರು ವೃತ್ತಿಪರ ಕ್ರೀಡಾಪಟುಗಳಾಗಿ ಬೆಳೆಯಲು ಅಗತ್ಯ ಪ್ರೋತ್ಸಾಹ ಹಾಗೂ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ಬಬಲೇಶ್ವರದಲ್ಲಿ ದಿ. ಶ್ರೀ ಬಿ.ಎಂ. ಪಾಟೀಲ ಅವರ ಸ್ಮರಣಾರ್ಥ ಶಾಂತವೀರ ಕ್ರಿಕೆಟ್ ಕ್ಲಬ್ ಹಾಗೂ ಶ್ರೀ ಸುನೀಲಗೌಡ ಪಾಟೀಲ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ ಬಬಲೇಶ್ವರ ಪ್ರೀಮಿಯರ್ ಲೀಗ್ (ಬಿಪಿಎಲ್) ಸೀಸನ್-2 ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಯುವಕರು ದೇಶದ ಅಮೂಲ್ಯ ಸಂಪತ್ತಾಗಿದ್ದು, ಕ್ರೀಡೆಗಳು ಅವರನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢರನ್ನಾಗಿ ರೂಪಿಸುತ್ತವೆ. ಈ ಉದ್ದೇಶದಿಂದ ಬಬಲೇಶ್ವರ ಪ್ರೀಮಿಯರ್ ಲೀಗ್ ಸೇರಿದಂತೆ ವಿವಿಧ ಕ್ರೀಡಾಕೂಟಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಹೇಳಿದರು.
ಬಿ.ಎಲ್.ಡಿ.ಇ. ಸಂಸ್ಥೆಯ ಶ್ರೀ ಬಿ.ಎಂ. ಪಾಟೀಲ ಸ್ಪೋರ್ಟ್ಸ್ ಅಕಾಡೆಮಿ ಮೂಲಕ ಬಾಲ್ಯದಿಂದಲೇ ಕ್ರಿಕೆಟ್, ಫುಟ್‌ಬಾಲ್, ಹಾಕಿ, ಬಾಸ್ಕೆಟ್‌ಬಾಲ್, ಟೆನಿಕಾಯ್ಟ್, ಬ್ಯಾಡ್ಮಿಂಟನ್ ಹಾಗೂ ಟೆನಿಸ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಚಿವ ಎಂ.ಬಿ. ಪಾಟೀಲ ಅವರ ನೀರಾವರಿ ಯೋಜನೆಗಳಿಂದ ಗ್ರಾಮೀಣ ಪ್ರದೇಶದ ಯುವಕರು ತೋಟಗಾರಿಕೆ, ಹೈನುಗಾರಿಕೆ ಸೇರಿದಂತೆ ವಿವಿಧ ಸ್ವಯಂ ಉದ್ಯೋಗಗಳಲ್ಲಿ ತೊಡಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಯುವಕರನ್ನು ಇನ್ನಷ್ಟು ಸಂಘಟಿಸುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಎಸ್.ವಿ. ಪಾಟೀಲ ಮಾತನಾಡಿ, ಯುವಕರು ವ್ಯಸನಗಳಿಂದ ದೂರವಿದ್ದು ಆರೋಗ್ಯವಂತ ಜೀವನ ನಡೆಸುವಂತೆ ಸುನೀಲಗೌಡ ಪಾಟೀಲ ಅವರು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದು, ಸಮಾಜಮುಖಿ ಚಟುವಟಿಕೆಗಳತ್ತ ಯುವಜನರನ್ನು ಸೆಳೆಯುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರುದ್ರಯ್ಯ ನಂದಿಕೋಲಮಠ ಸ್ವಾಮೀಜಿ, ಈರನಗೌಡ ಬಿರಾದಾರ, ಸಚೀನ ಕಲಾವಂತ, ಡಾ. ಮಹಾಂತೇಶ ಕನ್ನೂರ, ಆನಂದ ಬೂದಿಹಾಳ, ಪ್ರಕಾಶ ಜಾಲಗೇರಿ, ಚನ್ನಬಸಪ್ಪ ಕೋಟ್ಯಾಳ, ಸಿದರಾಯ ಆಡಿನ್, ಪರಶುರಾಮ ಪಡಗಾರ, ಹಣಮಂತ ಬಡಚಿ, ರಾಜಗುರು ಉಳ್ಳಾಗಡ್ಡಿ, ಸಂತೋಷ ರಾಂಪುರ, ರಾಜೇಶ ತಂಬಾಕೆ, ಸುನೀಲ ಸಿಂಗಾಡೆ, ಅಕ್ಷಯ ಮೆಡೆಗಾತ, ಹೇಮಂತ ಭೋವಿ, ಸದ್ದಾಂ ಮುಜಾವರ, ನವೀನ ಇಮನದ, ಬಸವರಾಜ ಲೋಕುರಿ, ಸಿಪಿಐ ರಮೇಶ ಅವಜಿ, ಪಿಎಸ್‌ಐ ಬಸವರಾಜ ಬಿ. ಮಳೆಪ್ಪನವರ ಸೇರಿದಂತೆ ಹಲವು ಮುಖಂಡರು, ಕ್ರೀಡಾಪಟುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂದ್ಯಾವಳಿ ಫಲಿತಾಂಶ:

ಚಾಂಪಿಯನ್: ಗೇಮ್ ಚೇಂಜರ್ ಜೈನಾಪುರ
ರನ್ನರ್‌ಅಪ್: ಶಾಂತವೀರ ಕ್ರಿಕೆಟ್ ಕ್ಲಬ್, ಬಬಲೇಶ್ವರ
ತೃತೀಯ ಸ್ಥಾನ: ಪಾಟೀಲ ಪ್ಯಾಂಥರ್ಸ್, ಹಳ್ಳಿ
ನಾಲ್ಕನೇ ಸ್ಥಾನ: ಮಂಗಳೂರು ಟೈಟನ್ಸ್

Share this