ಬಂಟ್ವಾಳದ ಲಾವಣ್ಯ ಹತ್ಯೆ ಪ್ರಕರಣ: ಆರೋಪಿಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ಆಗ್ರಹ

ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಶಿಲ್ಪಾ ಮೇತ್ರಿ ಒತ್ತಾಯ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 18:
ಬಂಟ್ವಾಳದಲ್ಲಿ ಯುವತಿ ಲಾವಣ್ಯ ಅವರನ್ನು ಸಾರ್ವಜನಿಕವಾಗಿ ಕ್ರೂರವಾಗಿ ಹತ್ಯೆಗೈದಿರುವ ಘಟನೆಗೆ ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ (ರಿ.) ತೀವ್ರವಾಗಿ ಖಂಡಿಸಿದೆ.
ಸಮಿತಿಯ ವಿಜಯಪುರ ಜಿಲ್ಲಾ ಮಹಿಳಾ ಅಧ್ಯಕ್ಷೆ ಶಿಲ್ಪಾ ಮೇತ್ರಿ ಅವರು ಈ ಕುರಿತು ಪ್ರಕಟಣೆ ನೀಡಿ, ಮಹಿಳೆಯರ ಸುರಕ್ಷತೆಗೆ ಧಕ್ಕೆ ತರುವ ಇಂತಹ ಅಮಾನವೀಯ ಕೃತ್ಯಗಳು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತಿವೆ ಎಂದು ಹೇಳಿದ್ದಾರೆ.
ಲಾವಣ್ಯ ಅವರಿಗೆ ನಿರಂತರ ಕಿರುಕುಳ ನೀಡಿ, ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮಾರ್ಗ ಮಧ್ಯೆ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ. ಕೊನೆಯ ಕ್ಷಣದವರೆಗೂ ಕುಟುಂಬದವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ ರಕ್ಷಣೆಗಾಗಿ ಮನವಿ ಮಾಡಿಕೊಂಡಿದ್ದರೂ, ಜೀವ ಉಳಿಯದಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಘಟನೆ ರಾಜ್ಯದ ಮಹಿಳೆಯರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಮಹಿಳೆಯರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಪ್ರಕರಣದ ಆರೋಪಿ ಚೇತನ್ ವಿರುದ್ಧ ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ನ್ಯಾಯಾಲಯದಲ್ಲಿ ಬಲವಾದ ಸಾಕ್ಷ್ಯಾಧಾರಗಳನ್ನು ಮಂಡಿಸಿ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಅವರು ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಅಲ್ಲದೆ, ಮೃತ ಲಾವಣ್ಯ ಅವರ ಕುಟುಂಬಕ್ಕೆ ನ್ಯಾಯಯುತ ಪರಿಹಾರ ಹಾಗೂ ಅಗತ್ಯ ನೆರವು ನೀಡಬೇಕು. ರಾಜ್ಯದಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಮಹಿಳೆಯರ ಸುರಕ್ಷತೆಗೆ ಪರಿಣಾಮಕಾರಿ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದ್ದಾರೆ.

Share this