ಸಪ್ತಸಾಗರ ವಾರ್ತೆ,ವಿಜಯಪುರ, ಜುಲೈ 18:
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಸಮಸ್ಯೆ ಇರುವ ಗ್ರಾಮಗಳಿಗೆ ಅಗತ್ಯವಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ 2–3 ತಿಂಗಳು ಮಳೆಯ ಅಭಾವ ಇರುವ ಸಾಧ್ಯತೆ ಇರುವುದರಿಂದ ಟಾಸ್ಕ್‌ಫೋರ್ಸ್ ಅನುದಾನವನ್ನು ಅಗತ್ಯವಿದ್ದಲ್ಲಿ ಮಾತ್ರ ಬಳಸಬೇಕು. ಹೊಸ ಬೋರ್‌ವೆಲ್‌ಗಳನ್ನು ಕೊರೆಯುವುದಕ್ಕಿಂತ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಆದ್ಯತೆ ನೀಡಬೇಕು ಎಂದರು.
ಪ್ರತಿ ವಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ, ಸಮಸ್ಯಾತ್ಮಕ ಗ್ರಾಮಗಳ ಪಟ್ಟಿಯನ್ನು ಸಿದ್ಧಪಡಿಸಿ ಜಿಲ್ಲಾ ಪಂಚಾಯತಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ಹರ್ ಘರ್ ಜಲ್ ಯೋಜನೆ:
ಜಿಲ್ಲೆಯಲ್ಲಿ 654 ಗ್ರಾಮಗಳ ಪೈಕಿ ಇದುವರೆಗೆ 331 ಗ್ರಾಮಗಳು ಮಾತ್ರ ಹರ್ ಘರ್ ಜಲ್ ಆ್ಯಪ್‌ನಲ್ಲಿ ಪ್ರಮಾಣೀಕರಿಸಲ್ಪಟ್ಟಿವೆ. ಉಳಿದ 323 ಗ್ರಾಮಗಳ ಪ್ರಮಾಣೀಕರಣವನ್ನು ಶೀಘ್ರ ಪೂರ್ಣಗೊಳಿಸಲು ಪ್ರತಿ ವಾರ ಕನಿಷ್ಠ ಒಂದು ಗ್ರಾಮವನ್ನು ಪ್ರಮಾಣೀಕರಿಸುವ ಗುರಿ ನಿಗದಿಪಡಿಸಲಾಯಿತು.
ಜಲ ಜೀವನ ಮಿಷನ್: ಜಿಲ್ಲೆಯ ಗ್ರಾಮೀಣ ಪ್ರದೇಶದ 4.64 ಲಕ್ಷ ಮನೆಗಳ ಪೈಕಿ 4.12 ಲಕ್ಷ ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಲಾಗಿದೆ. ಉಳಿದ ಮನೆಗಳಿಗೆ ಡಿಸೆಂಬರ್ 2026ರೊಳಗೆ ಕಡ್ಡಾಯವಾಗಿ ನಳ ಸಂಪರ್ಕ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಬಾಕಿ ಇರುವ ಫಲಾನುಭವಿಗಳ ಆಧಾರ್ ಮಾಹಿತಿಯನ್ನು ತ್ವರಿತವಾಗಿ ಸಂಗ್ರಹಿಸಿ ತಂತ್ರಾಂಶದಲ್ಲಿ ದಾಖಲಿಸುವಂತೆ ಸೂಚನೆ ನೀಡಿದರು.
ಜಲಧಾರೆ-01 ಮತ್ತು ಜಲಧಾರೆ-02:
ಎರಡೂ ಯೋಜನೆಗಳ ಬಾಕಿ ಕಾಮಗಾರಿಗಳು, ಪೈಪ್‌ಲೈನ್ ಹೈಡ್ರೋ ಟೆಸ್ಟ್, ವಿದ್ಯುತ್ ಸಂಪರ್ಕ ಹಾಗೂ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜಯ ಕೋಟೆನ್ನವರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


