ಸಪ್ತಸಾಗರ ವಾರ್ತೆ,ವಿಜಯಪುರ, ಜು.19:
ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ದಿವಂಗತ ಚನ್ನಮ್ಮ ದೇವೇಗೌಡ ಅವರಿಗೆ ವಿಜಯಪುರ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಕಾರ್ಯಾಲಯದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮೌನಾಚರಣೆ ನಡೆಸಿ, ದಿವಂಗತರ ಆತ್ಮಕ್ಕೆ ಶಾಂತಿ ಕೋರಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಹಿರಿಯ ಮುಖಂಡ ಪಂಚಪ್ಪ ಕಲಬುರ್ಗಿ, ಚನ್ನಮ್ಮ ದೇವೇಗೌಡ ಅವರು ಸರಳತೆ, ಸೌಜನ್ಯ ಹಾಗೂ ಕುಟುಂಬ ಮೌಲ್ಯಗಳ ಪ್ರತೀಕವಾಗಿದ್ದರು ಎಂದು ಸ್ಮರಿಸಿದರು. ದೇವೇಗೌಡರ ರಾಜಕೀಯ ಬದುಕಿನ ಯಶಸ್ಸಿನ ಹಿಂದೆ ಅವರ ತ್ಯಾಗ, ಸಹಕಾರ ಮತ್ತು ಪ್ರೋತ್ಸಾಹ ಮಹತ್ವದ ಪಾತ್ರ ವಹಿಸಿತ್ತು ಎಂದು ಹೇಳಿದರು. ಸಮಾಜದ ಸಾಮಾನ್ಯ ಜನರ ನೋವು-ನಲಿವುಗಳಿಗೆ ಸ್ಪಂದಿಸುವ ಅಪರೂಪದ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಅವರು ನುಡಿದರು.
ಮುಖಂಡ ರಾಜು ಹಿಪ್ಪರಗಿ ಮಾತನಾಡಿ, ಉನ್ನತ ಸ್ಥಾನದಲ್ಲಿದ್ದರೂ ಚನ್ನಮ್ಮ ದೇವೇಗೌಡ ಅವರು ಅತ್ಯಂತ ಸರಳ ಜೀವನ ನಡೆಸಿದವರು. ಕುಟುಂಬ, ಸಮಾಜ ಹಾಗೂ ಸಂಸ್ಕಾರಗಳಿಗೆ ನೀಡಿದ ಮಹತ್ವ ಇಂದಿನ ಯುವಜನತೆಗೆ ಆದರ್ಶವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಹಲವು ಮುಖಂಡರು ಚನ್ನಮ್ಮ ದೇವೇಗೌಡ ಅವರ ಸಾಮಾಜಿಕ ಕಳಕಳಿ, ಕುಟುಂಬದ ಮೇಲಿನ ಪ್ರೀತಿ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಹೊಂದಿದ್ದ ಆತ್ಮೀಯ ಸಂಬಂಧವನ್ನು ಸ್ಮರಿಸಿದರು. ಅವರ ಅಗಲಿಕೆ ರಾಜ್ಯಕ್ಕೆ ಹಾಗೂ ಜೆಡಿಎಸ್ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂತ್ಯದಲ್ಲಿ ಎಸ್.ಎಸ್. ಖಾದ್ರಿ ಇನಾಮದಾರ್ ವಂದನಾರ್ಪಣೆ ಸಲ್ಲಿಸಿ, ಚನ್ನಮ್ಮ ದೇವೇಗೌಡ ಅವರ ಆದರ್ಶಗಳನ್ನು ಮುಂದಿನ ಪೀಳಿಗೆ ಅನುಸರಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ, ಕೌಶರ್ ಶೇಖ, ಹುಸೇನ್ ಭಾಗಾಯತ, ಸಂಜು ಹಿರೇಮಠ, ಸಂಜು ದೊಡಮನಿ, ಮಲ್ಲು ತೊರವಿ, ಡಾ. ಶಮಷರಲಿ ಮುಲ್ಲಾ, ಬಾಬು ಶಿರಾನಗಾರ, ಬಸವರಾಜ ಇಂಚಗೇರಿ, ಶಿವಲಿಂಗ ಕಿಣಗಿ, ಜಾಫರ್ ಕಲಾದಗಿ ಸೇರಿದಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದು, ದಿವಂಗತರಿಗೆ ಪುಷ್ಪನಮನ ಸಲ್ಲಿಸಿದರು.
ಚನ್ನಮ್ಮ ದೇವೇಗೌಡರಿಗೆ ಜೆಡಿಎಸ್ ಜಿಲ್ಲಾ ಘಟಕದಿಂದ ಭಾವಪೂರ್ಣ ಶ್ರದ್ಧಾಂಜಲಿ


