ಸಪ್ತಸಾಗರ ವಾರ್ತೆ,ವಿಜಯಪುರ, ಜು.20:
ಸಮಾಜದ ಪ್ರಗತಿಗೆ ಶಿಕ್ಷಣ, ಸಂಸ್ಕಾರ, ಸಂಘಟನೆ ಮತ್ತು ಸಾಮಾಜಿಕ ಬದ್ಧತೆ ನಾಲ್ಕು ಪ್ರಮುಖ ಆಧಾರಸ್ತಂಭಗಳಾಗಿದ್ದು, ಇವುಗಳನ್ನು ಬಲಪಡಿಸಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಹೇಳಿದರು.
ನಗರದ ವೀರಶೈವ ಲಿಂಗಾಯತ ಸಮಾಜ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕರ್ನಾಟಕ ರಾಜ್ಯ ಘಟಕ ಹಾಗೂ ವಿಜಯಪುರ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಪರಸ್ಪರ ಸಹಕಾರ, ಸಂಘಟಿತ ಕಾರ್ಯಚಟುವಟಿಕೆ ಮತ್ತು ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ಹೊಸ ತಲೆಮಾರಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳು, ಸಾಮಾಜಿಕ ಹೊಣೆಗಾರಿಕೆ ಹಾಗೂ ಭಾರತೀಯ ಸಂಸ್ಕೃತಿಯ ಅರಿವು ಮೂಡಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ನಾಗಠಾಣದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಷಟ್ಸ್ಥಳ ಧ್ವಜಾರೋಹಣ ನೆರವೇರಿಸುವ ಮೂಲಕ ಉದ್ಘಾಟಿಸಿದರು.
ಜ್ಞಾನಯೋಗಾಶ್ರಮದ ಪರಮಪೂಜ್ಯ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಶರಣರ ತತ್ವಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಲ್ಲ; ಅವು ಮಾನವೀಯ ಮೌಲ್ಯ, ಸಮಾನತೆ, ಸೇವೆ ಮತ್ತು ಸತ್ಯನಿಷ್ಠ ಬದುಕಿನ ದಾರಿದೀಪವಾಗಿವೆ. ಪ್ರತಿಯೊಬ್ಬರೂ ಧರ್ಮದ ಜೊತೆಗೆ ಸಮಾಜ ಸೇವೆಯನ್ನೂ ಜೀವನದ ಧ್ಯೇಯವನ್ನಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರಾಜ್ಯ ಉಪಾಧ್ಯಕ್ಷ ಅಮರೇಗೌಡ ಭಯ್ಯಾಪುರ ಕಾರ್ಯಾಗಾರ ಉದ್ಘಾಟಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಳಿ ಪ್ರಾಸ್ತಾವಿಕವಾಗಿ ಕಾರ್ಯಾಗಾರದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು.
ಮೊದಲ ಗೋಷ್ಠಿಯಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಮಾತನಾಡಿ, ಬಸವಾದಿ ಶರಣರ ವಚನಗಳು ಸಮಾನತೆ, ಸ್ವಾಭಿಮಾನ ಹಾಗೂ ಮಹಿಳಾ ಸಬಲೀಕರಣದ ಮಹತ್ವವನ್ನು ಸಾರುತ್ತವೆ. ಮಹಿಳೆಯರು ಶಿಕ್ಷಣ ಮತ್ತು ನಾಯಕತ್ವದ ಮೂಲಕ ಸಮಾಜ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ಬುರಣಾಪುರದ ಪೂಜ್ಯ ಯೋಗೇಶ್ವರಿ ಮಾತಾಜಿ ಆಶೀರ್ವಚನ ನೀಡಿದರು. ಶಾರದಾ ಜಿ. ಕೊಪ್ಪ ಅವರು ವೀರಶೈವ ಲಿಂಗಾಯತ ಧರ್ಮ ಜಾಗೃತಿ ಹಾಗೂ ಸಂಘಟನೆಯಲ್ಲಿ ಮಹಿಳೆಯರ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಎರಡನೇ ಗೋಷ್ಠಿಯಲ್ಲಿ ಪರಮಪೂಜ್ಯ ಡಾ. ವಿವೇಕಾನಂದ ದೇವರು ತತ್ವ, ಮೌಲ್ಯ ಮತ್ತು ಕೃಷಿ ಕುರಿತು ಚಿಂತನೆ ಬಗ್ಗೆ ಆಶೀರ್ವಚನ ನೀಡಿದರು. ವಿಶ್ರಾಂತ ಪ್ರಾಧ್ಯಾಪಕ ಬಿ.ಎಂ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಡಾ. ಎ.ಎಂ. ಗೋರಚನ ಅವರು ವೀರಶೈವ ಲಿಂಗಾಯತ ತತ್ವಾಚರಣೆ ಮತ್ತು ಶರಣರ ಜೀವನ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದರು.
ಮೂರನೇ ಗೋಷ್ಠಿಯಲ್ಲಿ ಡಾ. ರವೀಂದ್ರ ಬೆಳ್ಳಿ ಅವರು ಸಾವಯವ ಕೃಷಿಯ ಅಗತ್ಯತೆ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಕುರಿತು ಉಪನ್ಯಾಸ ನೀಡಿದರು. ಡಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು ಕಾರ್ಯಾಗಾರದ ಅಂಗವಾಗಿ ದೀಪ ನೃತ್ಯ, ಭರತನಾಟ್ಯ, ವಚನ ನೃತ್ಯ, ಶಿವಸ್ತುತಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಬಿ.ಎಂ. ಪಾಟೀಲ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಂದ ಶರಣ ಸಂಸ್ಕೃತಿ ಬಿಂಬಿಸುವ ನಾಟಕ ಪ್ರದರ್ಶನ ವಿಶೇಷ ಆಕರ್ಷಣೆಯಾಯಿತು.
ಮಹಾಪೌರ ಎಸ್.ಎಂ. ಕರಡಿ, ವಿ.ಎಸ್. ತೇಲಿ, ಕಾಶಿನಾಥ ಅಣೆಪ್ಪನವರ, ವಿದ್ಯಾವತಿ ಅಂಕಲಗಿ, ಸಹದೇವ ನಾಡಗೌಡ, ಬಿ.ಟಿ. ಈಶ್ವರಗೌಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಮಾಜದ ಮುಖಂಡರು, ಮಹಿಳಾ ಪ್ರತಿನಿಧಿಗಳು, ಯುವಕರು ಹಾಗೂ ನೂರಾರು ಕಾರ್ಯಕರ್ತರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಸಂಘಟಿತ ಸಮಾಜ ನಿರ್ಮಾಣಕ್ಕೆ ಶಿಕ್ಷಣ, ಸಂಸ್ಕಾರ ಅಗತ್ಯ: ಶಂಕರ ಬಿದರಿ


