‘ರಾಮ ಮಂದಿರ ಕುರಿತು ಸುಳ್ಳು ಮಾಹಿತಿ ಹರಡಿದ ಎಸ್.ಎಂ. ಪಾಟೀಲ ಗಣಿಹಾರ ದೇಶದ ಜನರ ಕ್ಷಮೆಯಾಚಿಸಲಿ’

ಬಹಿರಂಗ ಚರ್ಚೆಗೆ ಬರುವಂತೆ ಬಿಜೆಪಿ ಮುಖಂಡ ರವೀಂದ್ರ ಲೋಣಿ ಸವಾಲು

ಸಪ್ತಸಾಗರ ವಾರ್ತೆ,ವಿಜಯಪುರ, ಜು. 21:
ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣವು ಜನರ ತೆರಿಗೆ ಹಣದಿಂದ ನಡೆದಿದೆ ಎಂಬ ಕಾಂಗ್ರೆಸ್ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಅವರ ಹೇಳಿಕೆ ಸಂಪೂರ್ಣ ಸುಳ್ಳು, ಜನರನ್ನು ದಿಕ್ಕು ತಪ್ಪಿಸುವ ಹಾಗೂ ರಾಜಕೀಯ ದುರುದ್ದೇಶದಿಂದ ಕೂಡಿದದ್ದು. ಕೂಡಲೇ ದೇಶದ ಜನರ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ರವೀಂದ್ರ ಲೋಣಿ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಯಾವುದೇ ಆರ್ಥಿಕ ಅನುದಾನ ನೀಡಿಲ್ಲ. ಸರ್ಕಾರವು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಕೇವಲ ಸಾಂಕೇತಿಕವಾಗಿ ಒಂದು ರೂಪಾಯಿ ನೀಡಿದ್ದು, ಮಂದಿರ ನಿರ್ಮಾಣ ಸಂಪೂರ್ಣವಾಗಿ ದೇಶದ ಕೋಟ್ಯಂತರ ಭಕ್ತರ ಸ್ವಯಂಪ್ರೇರಿತ ದೇಣಿಗೆಯಿಂದ ನಡೆದಿದೆ. ಇಂತಹ ಸಂದರ್ಭದಲ್ಲಿ ಜನರ ತೆರಿಗೆ ಹಣ ಬಳಸಲಾಗಿದೆ ಎಂದು ಹೇಳುವುದು ಜನರಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶಿತ ಅಪಪ್ರಚಾರ ಎಂದು ಆರೋಪಿಸಿದರು.
ಅಲ್ಪಸಂಖ್ಯಾತರ ಹಿತದ ಬಗ್ಗೆ ನಿಜವಾದ ಕಾಳಜಿ ಇದ್ದರೆ ವಕ್ಫ್ ಆಸ್ತಿ ಅತಿಕ್ರಮಣ, ಅನ್ವರ್ ಮಾನಿಪ್ಪಡಿ ವರದಿಯ ಶಿಫಾರಸುಗಳ ಜಾರಿ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಧ್ವನಿ ಎತ್ತಬೇಕು. ಅದನ್ನು ಬಿಟ್ಟು ಶ್ರೀರಾಮ ಮಂದಿರದಂತಹ ರಾಷ್ಟ್ರೀಯ ಭಾವನೆಯ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸುವುದು ಕಾಂಗ್ರೆಸ್‌ನ ದ್ವಂದ್ವ ನೀತಿಯನ್ನು ಬಿಂಬಿಸುತ್ತದೆ ಎಂದು ಟೀಕಿಸಿದರು.
ವಿಧಾನ ಪರಿಷತ್ ಸದಸ್ಯತ್ವದ ಆಸೆಯಿಂದ ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸಲು ಆಧಾರರಹಿತ ಆರೋಪಗಳನ್ನು ಮಾಡುವುದು ರಾಜಕೀಯ ಸಂಸ್ಕೃತಿಗೆ ಶೋಭೆ ತರುವುದಿಲ್ಲ. ರಾಜ್ಯ ಸರ್ಕಾರದ ಐಟಿ-ಬಿಟಿ ಸಚಿವರು ಕೇಂದ್ರ ಸರ್ಕಾರದ ಸಾಧನೆಗಳನ್ನು ನೋಡಿ ಕಲಿಯಬೇಕು ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸುವ ಬದಲು ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿರುವುದರ ಹಿಂದಿನ ಕಾರಣವೇನು ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟರು.
ಸಾಧು-ಸಂತರ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡುವುದು ಕಾಂಗ್ರೆಸ್ ನಾಯಕರ ಚಾಳಿಯಾಗಿದೆ. ಎಸ್.ಎಂ. ಪಾಟೀಲ ಗಣಿಹಾರ ಅವರ ಆರೋಪಗಳಲ್ಲಿಯೂ ಯಾವುದೇ ಸತ್ಯಾಂಶವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದ್ದು, ವಿಶ್ವಗುರುವಾಗುವ ದಿಕ್ಕಿನಲ್ಲಿ ದೃಢ ಹೆಜ್ಜೆ ಇಡುತ್ತಿದೆ ಎಂದು ಹೇಳಿದರು.

‘ದಾಖಲೆಗಳೊಂದಿಗೆ ಚರ್ಚೆಗೆ ಸಿದ್ಧ’

ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಬಹಿರಂಗ ವೇದಿಕೆಯಲ್ಲಿ ದಾಖಲೆಗಳು ಹಾಗೂ ಅಂಕಿ-ಅಂಶಗಳೊಂದಿಗೆ ಚರ್ಚೆಗೆ ತಾವು ಸಿದ್ಧ ಎಂದು ರವೀಂದ್ರ ಲೋಣಿ ಸವಾಲು ಹಾಕಿದರು. ಕೇಂದ್ರ ಸರ್ಕಾರದ ವೈಫಲ್ಯವನ್ನು ಸಾಬೀತುಪಡಿಸಿದರೆ ಒಪ್ಪಿಕೊಳ್ಳುತ್ತೇನೆ; ಇಲ್ಲವಾದರೆ ಸುಳ್ಳು ಮಾಹಿತಿ ಹರಡಿರುವುದಕ್ಕಾಗಿ ಎಸ್.ಎಂ. ಪಾಟೀಲ ಗಣಿಹಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಪಕ್ಷದ ಮುಖಂಡರ ಆಧಾರರಹಿತ ಹಾಗೂ ಜನರಲ್ಲಿ ಗೊಂದಲ ಸೃಷ್ಟಿಸುವ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು. ಇಲ್ಲವಾದರೆ ಅಂತಹ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷದ ವಿಶ್ವಾಸಾರ್ಹತೆಗೆ ಧಕ್ಕೆಯಾಗಲಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹಕಾರಿ ಧುರೀಣ ಹಾಗೂ ಬಿಜೆಪಿ ಮುಖಂಡ ರಮೇಶ ಬಿದನೂರ ಉಪಸ್ಥಿತರಿದ್ದರು.

Share this