ದೋಷರಹಿತ ಮತದಾರರ ಪಟ್ಟಿ ಸಿದ್ಧತೆಗೆ ರಾಜಕೀಯ ಪಕ್ಷಗಳ ಸಹಕಾರ ಅಗತ್ಯ: ಡಿಸಿ ಡಾ. ಆನಂದ್ ಕೆ.

ಸಪ್ತಸಾಗರ ವಾರ್ತೆ ವಿಜಯಪುರ, ಜು.21:
ದೋಷರಹಿತ, ಪಾರದರ್ಶಕ ಹಾಗೂ ನಿಖರ ಮತದಾರರ ಪಟ್ಟಿ ಸಿದ್ಧಪಡಿಸಲು ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರ ಸಕ್ರಿಯ ಸಹಕಾರ ಅತ್ಯಗತ್ಯ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಸುಗಮವಾಗಿ ನಡೆಯುತ್ತಿದ್ದು, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಮನೆ ಮನೆಗೆ ಭೇಟಿ ನೀಡುತ್ತಿರುವ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮತದಾರರ ಮಾಹಿತಿ ಸಂಗ್ರಹಿಸುತ್ತಿದ್ದು, ರಾಜಕೀಯ ಪಕ್ಷಗಳ ಏಜೆಂಟರು ಈ ಪ್ರಕ್ರಿಯೆಗೆ ಸಹಕಾರ ನೀಡಬೇಕು. ಎಸ್‌ಐಆರ್ ನೋಂದಣಿಯ ಮಹತ್ವದ ಕುರಿತು ಶಾಲೆ-ಕಾಲೇಜುಗಳು ಸೇರಿದಂತೆ ವಿವಿಧ ಮಟ್ಟಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮತಗಟ್ಟೆವಾರು ಮತದಾರರ ಪಟ್ಟಿಯನ್ನು ಈಗಾಗಲೇ ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಪಾರದರ್ಶಕವಾಗಿ ಕಾರ್ಯ ನಡೆಯುತ್ತಿದ್ದು, ಮಾಹಿತಿ ವೆಬ್‌ಸೈಟ್ ಮೂಲಕವೂ ಸಾರ್ವಜನಿಕರಿಗೆ ಲಭ್ಯವಾಗುತ್ತಿದೆ ಎಂದು ಹೇಳಿದರು.

19.82 ಲಕ್ಷ ಮತದಾರರು

ಜಿಲ್ಲೆಯಲ್ಲಿ 2026ರ ಜೂನ್ ವೇಳೆಗೆ ಒಟ್ಟು 19,82,114 ಮತದಾರರು ಇದ್ದಾರೆ. ಚುನಾವಣಾ ಆಯೋಗವು ಎಲ್ಲ ಮತದಾರರ ಗಣತಿ ನಮೂನೆಗಳನ್ನು ಮುದ್ರಿಸಿ ಬಿಎಲ್‌ಒಗಳಿಗೆ ವಿತರಿಸಿದ್ದು, ಜೂನ್ 30ರಿಂದ ಆರಂಭವಾದ ಪರಿಷ್ಕರಣೆ ಕಾರ್ಯ ಆಗಸ್ಟ್ 8ರವರೆಗೆ ನಡೆಯಲಿದೆ ಎಂದು ತಿಳಿಸಿದರು.

ಜುಲೈ 20ರವರೆಗೆ ಜಿಲ್ಲೆಯಲ್ಲಿ 19,53,839 ಗಣತಿ ನಮೂನೆಗಳನ್ನು ಮತದಾರರಿಗೆ ವಿತರಿಸಲಾಗಿದ್ದು, ಸುಮಾರು 13 ಲಕ್ಷ ನಮೂನೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಪ್ರತಿದಿನದ ಡಿಜಿಟಲೀಕರಣ ಕಾರ್ಯದ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದೆ ಎಂದು ಹೇಳಿದರು.

19 ಸಾವಿರಕ್ಕೂ ಅಧಿಕ ಮೃತ ಮತದಾರರ ಗುರುತು

ಪರಿಶೀಲನೆ ವೇಳೆ ಜಿಲ್ಲೆಯಲ್ಲಿ 19,073 ಮೃತ ಮತದಾರರು ಹಾಗೂ 21,379 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಪತ್ತೆಯಾಗಿದೆ. ಇದೇ ವೇಳೆ 6,845 ಹೊಸ ಮತದಾರರು ನೋಂದಾಯಿಸಿಕೊಂಡಿದ್ದಾರೆ. ಸಂಗ್ರಹಿಸಲಾಗದ ಅಥವಾ ಗೈರುಹಾಜರಿದ್ದ 504 ಪ್ರಕರಣಗಳು ಹಾಗೂ ಇತರೆ 238 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ಯುವ ಮತದಾರರಿಗೆ ಅವಕಾಶ

ಅಕ್ಟೋಬರ್ 1ರೊಳಗೆ 18 ವರ್ಷ ಪೂರೈಸುವ ಯುವಕರು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದೆ. ಹೊಸ ಮತದಾರರು ನಿಗದಿತ ಅವಧಿಯಲ್ಲಿ ನಮೂನೆ-6 ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಎಸ್‌ಐಆರ್ ಅವಧಿ ವಿಸ್ತರಣೆ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದ ಅವಧಿಯನ್ನು ವಿಸ್ತರಿಸಲಾಗಿದ್ದು, ಬಿಎಲ್‌ಒಗಳ ಮನೆ ಮನೆ ಭೇಟಿ ಕಾರ್ಯಕ್ರಮವನ್ನು ಜುಲೈ 29ರಿಂದ ಆಗಸ್ಟ್ 8ರವರೆಗೆ ಮುಂದುವರಿಸಲಾಗಿದೆ.
ಆಗಸ್ಟ್ 8ರಂದು ಮತಗಟ್ಟೆಗಳ ಮರುಹೊಂದಾಣಿಕೆ ಮತ್ತು ಸುವ್ಯವಸ್ಥೀಕರಣ ಕಾರ್ಯ ಪೂರ್ಣಗೊಳ್ಳಲಿದೆ. ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಸೆಪ್ಟೆಂಬರ್ 16ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುತ್ತದೆ. ಆಕ್ಷೇಪಣೆಗಳ ಇತ್ಯರ್ಥದ ಬಳಿಕ ಅಕ್ಟೋಬರ್ 19ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಡಾ. ಆನಂದ್ ಕೆ. ತಿಳಿಸಿದರು.
ಸಭೆಯಲ್ಲಿ ಚುನಾವಣಾ ತಹಶೀಲ್ದಾರ್ ಪ್ರೇಮಸಿಂಗ್ ಪವಾರ, ಸಚ್ಚಿದಾನಂದ ತೇರದಾಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Share this