ಯುವಕರನ್ನು ಕೆಣಕಿದವರು ಉದ್ಧಾರವಾಗಿಲ್ಲ; ಅವರ ಧ್ವನಿಗೆ ಕೇಂದ್ರ ಸರ್ಕಾರ ಸ್ಪಂದಿಸಲಿ: ಸುನೀಲಗೌಡ ಪಾಟೀಲ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 24:
ದೇಶದ ಯುವಕರನ್ನು ಯಾರೂ ಕೆಣಕಬಾರದು. ಅವರನ್ನು ಕೆಣಕಿದವರು ಯಾರೂ ಉದ್ಧಾರವಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮ ಪ್ರಕಟಣೆ ನೀಡಿರುವ ಅವರು, “ಭಾರತ ಯುವಕರ ದೇಶ. ಯುವಶಕ್ತಿಯೇ ರಾಷ್ಟ್ರದ ನಿಜವಾದ ಬಲವಾಗಿದ್ದು, ದೇಶದ ಭವಿಷ್ಯ ಅವರ ಕೈಯಲ್ಲಿದೆ. ಯುವಕರು ಮನಸ್ಸು ಮಾಡಿದರೆ ಇತಿಹಾಸವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ” ಎಂದು ಹೇಳಿದರು.
ದೇಶದಲ್ಲಿ ಪ್ರತಿವರ್ಷ 20 ಲಕ್ಷಕ್ಕೂ ಹೆಚ್ಚು ಯುವಕರು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದು, ಯಶಸ್ಸಿಗಾಗಿ ಹಗಲು-ರಾತ್ರಿ ಶ್ರಮಿಸುತ್ತಾರೆ. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಘಟನೆಗಳು ವಿದ್ಯಾರ್ಥಿಗಳಷ್ಟೇ ಅಲ್ಲ, ಅವರ ಪೋಷಕರ ಕನಸು ಮತ್ತು ಪರಿಶ್ರಮವನ್ನೂ ನುಚ್ಚುನೂರು ಮಾಡುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಯುವಕರು ತಮ್ಮ ಮೇಲಾದ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಸಹಜ. ಆದರೆ, ಕೇಂದ್ರ ಸರ್ಕಾರ ಈ ಪ್ರತಿಭಟನೆಗಳನ್ನು ನಿರ್ವಹಿಸುತ್ತಿರುವ ವಿಧಾನ ಖಂಡನೀಯವಾಗಿದೆ. ದೇಶದ ಭವಿಷ್ಯವಾಗಿರುವ ಯುವಕರನ್ನು ನಮ್ಮ ಮಕ್ಕಳಂತೆ ಕಾಣಬೇಕು. ಇಂತಹ ಸಂದರ್ಭದಲ್ಲಿ ರಾಜಕೀಯ ಭೇದ ಮರೆತು ಎಲ್ಲರೂ ಯುವಜನತೆಯ ಬೆಂಬಲಕ್ಕೆ ನಿಲ್ಲಬೇಕಾಗಿದೆ ಎಂದು ಅವರು ಆಗ್ರಹಿಸಿದರು.
ಯುವಕರ ಭಾವನೆಗಳಿಗೆ ಗೌರವ ನೀಡಬೇಕು. ಅವರ ನೋವು, ಆಕ್ರೋಶ ಮತ್ತು ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು. ಯುವಶಕ್ತಿಯನ್ನು ದೇಶದ ಅಭಿವೃದ್ಧಿಗೆ ಸಕಾರಾತ್ಮಕವಾಗಿ ಬಳಸಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಅವರು ಹೇಳಿದರು.
ಹಳೆಯ ಅನುಭವ ಮತ್ತು ಹೊಸ ತಲೆಮಾರಿನ ಚಿಂತನೆ ಒಂದಾಗಿ ಸಾಗಿದಾಗ ಮಾತ್ರ ದೇಶದ ಅಭಿವೃದ್ಧಿ ಮತ್ತು ಸಮೃದ್ಧಿ ಸಾಧ್ಯವಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಯುವಕರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವರಿಗೆ ನ್ಯಾಯ ಒದಗಿಸುವತ್ತ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸುನೀಲಗೌಡ ಪಾಟೀಲ ಒತ್ತಾಯಿಸಿದರು.

Share this