ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಗರಿ: ಬಿಎಲ್‌ಡಿಇ ಎಸ್‌ಎಸ್‌ಎಂ ಫಾರ್ಮಸಿ ಕಾಲೇಜಿಗೆ 2ನೇ ರ‍್ಯಾಂಕ್

ಸಪ್ತಸಾಗರ ವಾರ್ತೆ,ವಿಜಯಪುರ, ಜು. 24:
ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ನಿರಂತರ ಸಾಧನೆ ಮಾಡುತ್ತಿರುವ ನಗರದ ಪ್ರತಿಷ್ಠಿತ ಬಿಎಲ್‌ಡಿಇ ಸಂಸ್ಥೆಯ ಎಸ್.ಎಸ್.ಎಂ ಕಾಲೇಜ್ ಆಫ್ ಫಾರ್ಮಸಿ ಆ್ಯಂಡ್ ರಿಸರ್ಚ್ ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮಹತ್ವದ ಗೌರವಕ್ಕೆ ಪಾತ್ರವಾಗಿದೆ. ದೇಶದ ಹೆಸರಾಂತ ನಿಯತಕಾಲಿಕ ಔಟ್‌ಲುಕ್ ಐಸಿಎಆರ್‌ಇ–2026 ನಡೆಸಿದ ರಾಷ್ಟ್ರೀಯ ಸಮೀಕ್ಷೆಯಲ್ಲಿ ಕಾಲೇಜು ದೇಶದ ಅತ್ಯುತ್ತಮ ಫಾರ್ಮಸಿ ಕಾಲೇಜುಗಳ ಪೈಕಿ 2ನೇ ಸ್ಥಾನ ಪಡೆದು ವಿಜಯಪುರಕ್ಕೆ ಹೆಮ್ಮೆ ತಂದಿದೆ.
ಕಳೆದ ವರ್ಷದ ಸಮೀಕ್ಷೆಯಲ್ಲಿ ಕಾಲೇಜು 3ನೇ ಸ್ಥಾನ ಪಡೆದಿದ್ದರೆ, ಈ ಬಾರಿ ಒಂದು ಸ್ಥಾನ ಮೇಲೇರಿ 2ನೇ ರ‍್ಯಾಂಕ್ ಗಳಿಸಿರುವುದು ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಹಾಗೂ ಸಂಶೋಧನಾ ಸಾಧನೆಗೆ ಸಂದಿರುವ ಮತ್ತೊಂದು ದೊಡ್ಡ ಮಾನ್ಯತೆಯಾಗಿದೆ.
ಈಗಾಗಲೇ ನ್ಯಾಕ್ (NAAC) A++ ಮಾನ್ಯತೆ ಪಡೆದ ಮೊದಲ ಫಾರ್ಮಸಿ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಎಸ್.ಎಸ್.ಎಂ ಕಾಲೇಜಿನ ಸಾಧನೆಗೆ ಈ ರಾಷ್ಟ್ರೀಯ ರ‍್ಯಾಂಕಿಂಗ್ ಮತ್ತೊಂದು ಗರಿ ಸೇರಿಸಿದಂತಾಗಿದೆ.
ಸಮೀಕ್ಷೆಯಲ್ಲಿ ಕಾಲೇಜಿನ ಬೋಧನೆಯ ಗುಣಮಟ್ಟ, ಕಲಿಕಾ ವಾತಾವರಣ, ಪಠ್ಯ ಹಾಗೂ ಪ್ರಾಯೋಗಿಕ ಶಿಕ್ಷಣ, ಸಂಶೋಧನಾ ಚಟುವಟಿಕೆಗಳು, ವಿದ್ಯಾರ್ಥಿಗಳಿಗೆ ಒದಗಿಸಿರುವ ಆಧುನಿಕ ಸೌಲಭ್ಯಗಳು ಮತ್ತು ಪಠ್ಯೇತರ ಚಟುವಟಿಕೆಗಳ ಸಮಗ್ರ ಮೌಲ್ಯಮಾಪನದ ಆಧಾರದ ಮೇಲೆ ಈ ರ‍್ಯಾಂಕ್ ನೀಡಲಾಗಿದೆ.
ಈ ಅಪೂರ್ವ ಸಾಧನೆಗೆ ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ ಹಾಗೂ ಸಚಿವ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಡೀಮ್ಡ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಮತ್ತು ಸಂಸ್ಥೆಯ ಮುಖ್ಯ ಸಲಹೆಗಾರ ಡಾ. ಆರ್. ವಿ. ಕುಲಕರ್ಣಿ ಹರ್ಷ ವ್ಯಕ್ತಪಡಿಸಿದ್ದಾರೆ. ಕಾಲೇಜಿನ ಪ್ರಾಚಾರ್ಯ ಡಾ. ಸಿ. ಮಲ್ಲಿಕಾರ್ಜುನ ಶೆಟ್ಟಿ ಅವರು ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಈ ಸಾಧನೆ ಸಂಸ್ಥೆಯ ಗುಣಮಟ್ಟದ ಶಿಕ್ಷಣ ಮತ್ತು ಸಮರ್ಪಿತ ತಂಡದ ಪರಿಶ್ರಮಕ್ಕೆ ದೊರೆತ ಫಲವಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this