ಮಠಗಳ ಕಾರ್ಯ ಅನನ್ಯ: ಡಾ. ಸಂಗಮೇಶ ಮೇತ್ರಿ

ಸಪ್ತಸಾಗರ ವಾರ್ತೆ,ಇಂಡಿ, ಜು. 25:
ಮಠಗಳು ತಮ್ಮ ಅಸ್ತಿತ್ವ ಉಳಿಸಿಕೊಂಡು ಸಾಮಾಜಿಕ ಪರಿವರ್ತನೆಗೆ ಕಾರಣವಾಗಿ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಬಂದಿವೆ ಎಂದು ಸಾಹಿತಿ ಡಾ ಸಂಗಮೇಶ ಮೇತ್ರಿ ಹೇಳಿದರು.
ಶನಿವಾರ ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಗಲಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ‘ಇಂಡಿ ತಾಲೂಕಿನ ಮಠ ಮಾನ್ಯಗಳು’ ಕುರಿತ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಹಾಗೂ ಶಿಕ್ಷಣ ಬಿತ್ತುವಲ್ಲಿ, ಸಂಸ್ಕೃತಿ ಹಂಚುವಲ್ಲಿ ಇಂಡಿ ತಾಲೂಕಿನ ಹಲವು ಮಠಗಳು ಕೆಲಸ ಮಾಡಿವೆ. ಅದರಲ್ಲಿ ಇಂಚಗೇರಿ ಮಠ, ಬಂಥನಾಳ ಮಠ, ಗೋಳಸಾರ ಮಠ, ಲಚ್ಯಾಣ ಮಠ ಅತ್ಯಂತ ಪ್ರಮುಖವಾಗಿವೆ ಹಾಗೂ ಅವುಗಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಇಂಡಿ ತಾಲೂಕಿನ ಮಠಗಳು ಆಧ್ಯಾತ್ಮಿಕ ಜಾಗೃತಿ, ಶೈಕ್ಷಣಿಕ ಪ್ರಗತಿ, ಸಾಮಾಜಿಕ ಸೌಹಾರ್ದತೆಗೆ ಹೆಸರಾಗಿದ್ದು, ಅವು ಗ್ರಾಮೀಣ ಪ್ರದೇಶದಲ್ಲಿ ಧರ್ಮ ಸಂಸ್ಕೃತಿಯ ಜತೆಗೆ ಭಕ್ತರಿಗೆ ನೈತಿಕತೆ, ಭಕ್ತಿ, ದಾರ್ಮಿಕ ಚಿಂತನೆಗಳನ್ನು ತಿಳಿಸಿವೆ.
ಜಾತಿ-ಮತ ಭೇದವಿಲ್ಲದೆ ಎಲ್ಲರಿಗೂ ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರುವ ಈ ಮಠಗಳು ಸಮಾಜಕ್ಕೆ ಅನುಪಮ ಕೊಡುಗೆ ನೀಡಿವೆ ಎಂದು ಹೇಳಿದರು.
ಸಾಹಿತಿ ಸಿ.ಎಂ. ಬಂಡಗರ ಸಮಾರೋಪ ಭಾಷಣ
ಮಾಡಿ, ಮಠಗಳು ಇಂದು ತಮ್ಮ ಹಳೆ ಸಂಪ್ರದಾಯ ಬಿಟ್ಟು ಸಮಾಜದ ಭಕ್ತರ ಮಧ್ಯೆ ಬಂದು ಜನಪರ ಆಚರಣೆ ವಿಚಾರಗಳನ್ನು ಅನುಷ್ಠಾನ ಮಾಡುತ್ತಿರುವುದು ಅತ್ಯುತ್ತಮ ಕೆಲಸಗಳಲಿ ಒಂದು ಎಂದು ಹೇಳಿದರು.
ಸಾಹಿತಿ ಡಾ. ಚನ್ನಪ್ಪ ಕಟ್ಟಿ, ಕವಿ ದೇವು ಮಾಕೊಂಡ, ಗೀತಯೋಗಿ, ವೈ.ಜಿ. ಬಿರಾದಾರ, ಸದಾನಂದ ಈರಣಕೇರಿ, ಸಿದ್ರಾಮಪ್ಪ ಮಾರನೂರ, ರಾಚು ಕೊಪ್ಪ, ನಿಂಗಣ್ಣ ಬಿರಾದಾರ, ಡಾ ರಾಜಶ್ರೀ ಮಾರನೂರ, ರವಿ ಅರಳಿ, ಆರ್ ವ್ಹಿ ಪಾಟೀಲ, ಸಂಗನಗೌಡ ಹಚಡದ, ಅನಿತಾ ಅಳಗುಂಡಗಿ, ರೇಖಾ ನಾಗಠಾಣ, ಸುವರ್ಣ ಗುರವ, ಸಂಗಮೇಶ ಗುರವ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಶಿಕ್ಷಕ ಸಂತೋಷ ಬಂಡೆ ಸ್ವಾಗತಿಸಿ ಪರಿಚಯಿಸಿದರು. ಶಿಕ್ಷಕ ಶ್ರೀಧರ ಹಿಪ್ಪರಗಿ ನಿರೂಪಿಸಿದರು.

Share this