ಪುನರ್ವಸತಿ ವಿಳಂಬ ಬೇಡ; ಮೂಲಸೌಕರ್ಯ ಕಲ್ಪಿಸಿ ಕಾಮಗಾರಿ ತ್ವರಿತಗೊಳಿಸಿ

ಖಾಜಾ ನಗರ–ಟಿಪ್ಪು ನಗರದ ನಿವಾಸಿಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತಕ್ಕೆ ದಲಿತ ಸ್ವರಾಜ್ಯ ಸೇನೆ ಆಗ್ರಹ

ಸಪ್ತಸಾಗರ ವಾರ್ತೆ,ವಿಜಯಪುರ, ಜು.31:
ನಗರದ ಖಾಜಾ ನಗರ ಹಾಗೂ ಟಿಪ್ಪು ನಗರದ ಕೊಳಚೆ ಪ್ರದೇಶದ ನಿವಾಸಿಗಳ ಪುನರ್ವಸತಿ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಿ, ಮಂಜೂರಾಗಿರುವ ಜಾಗದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕೂಡಲೇ ಕಲ್ಪಿಸುವಂತೆ ದಲಿತ ಸ್ವರಾಜ್ಯ ಸೇನೆ–ಕರ್ನಾಟಕ ಸಂಘಟನೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಬುರಣಾಪುರ ಗ್ರಾಮದ ಸರ್ವೇ ನಂ.67/1ರಲ್ಲಿ ಪುನರ್ವಸತಿಗಾಗಿ 5 ಎಕರೆ ಜಮೀನು ಮಂಜೂರು ಮಾಡಿರುವ ಸರ್ಕಾರ ಹಾಗೂ ಜಿಲ್ಲಾಡಳಿತದ ಕ್ರಮವನ್ನು ಸಂಘಟನೆ ಸ್ವಾಗತಿಸಿದ್ದು, ಜಮೀನು ಮಂಜೂರಿನಲ್ಲೇ ಯೋಜನೆ ಸೀಮಿತವಾಗದೆ ಫಲಾನುಭವಿಗಳು ಶೀಘ್ರದಲ್ಲಿ ಹೊಸ ಬಡಾವಣೆಯಲ್ಲಿ ನೆಲೆಸುವಂತೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದೆ.
ಪುನರ್ವಸತಿ ಪ್ರದೇಶದಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್, ಒಳಚರಂಡಿ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿಪಡಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆ, ಮಹಾನಗರ ಪಾಲಿಕೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಹೆಸ್ಕಾಂ ಸೇರಿದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಜಂಟಿ ಸಭೆ ನಡೆಸಿ, ಕಾಮಗಾರಿಗಳಿಗೆ ನಿಗದಿತ ಕಾಲಮಿತಿ ವಿಧಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ತಕ್ಷಣವೇ 3ರಿಂದ 4 ಬೋರ್‌ವೆಲ್‌ಗಳನ್ನು ಕೊರೆಸಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಒಳಚರಂಡಿ ಸಂಪರ್ಕ ಕಾಮಗಾರಿ ಪೂರ್ಣಗೊಳಿಸಿ, ವಸತಿ ಪ್ರದೇಶವನ್ನು ವಾಸಯೋಗ್ಯವಾಗಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಮಹಾನಗರ ಪಾಲಿಕೆ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಶೀಘ್ರ ವಿತರಿಸಿ ಸ್ಥಳಾಂತರ ಪ್ರಕ್ರಿಯೆಗೆ ವೇಗ ನೀಡಬೇಕು. ಹೆಸ್ಕಾಂ ನೂತನ ಬಡಾವಣೆಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ ತ್ವರಿತ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ವರ್ಷಗಳಿಂದ ಮೂಲಸೌಕರ್ಯಗಳ ಕೊರತೆಯಲ್ಲಿ ಬದುಕು ಸಾಗಿಸುತ್ತಿರುವ ಖಾಜಾ ನಗರ ಮತ್ತು ಟಿಪ್ಪು ನಗರದ ನೂರಾರು ಕುಟುಂಬಗಳಿಗೆ ಈ ಪುನರ್ವಸತಿ ಯೋಜನೆ ಹೊಸ ಬದುಕಿನ ಭರವಸೆಯಾಗಿದೆ. ಹೀಗಾಗಿ ಯೋಜನೆ ಅನುಷ್ಠಾನದಲ್ಲಿ ಯಾವುದೇ ವಿಳಂಬವಾಗದಂತೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡು, ಶೀಘ್ರದಲ್ಲೇ ಫಲಾನುಭವಿಗಳಿಗೆ ವಸತಿ ಸೌಲಭ್ಯ ಒದಗಿಸಬೇಕೆಂದು ಸಂಘಟನೆ ಮನವಿ ಮಾಡಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಗೌಡಪ್ಪ ಬಡಿಗೇರ, ಅಮೃತ ಮಾವಿನಹಳ್ಳಿ, ಪರಶುರಾಮ ಕರವಿನಾಳ, ತಿಪ್ಪಣ್ಣ ಡಿ., ಸುಭಾಷ್ ಪಾಂಡ್ರೆ, ಪ್ರಭು ಸಿಂದೆ, ಅಕ್ಷಯ್ ಕುಮಾರ್ ಅಜಮನಿ, ಆರೂಢಸ್ವಾಮಿ ಕಬಾಡೆ, ರಮೇಶ್ ಚವ್ಹಾಣ್, ಸುಭಾಷ್ಚಂದ್ರ ಹೊನ್ನಕಾಂತ, ಗುರುಪಾದ ಬಿರಾದಾರ, ಹುಲಗೆಪ್ಪ ಹಂದ್ರಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this