ಸಪ್ತಸಾಗರ ವಾರ್ತೆ,ನವದೆಹಲಿ/ವಿಜಯಪುರ, ಜು. 31:
ವಿಜಯಪುರ ವಿಮಾನ ನಿಲ್ದಾಣದ ಕಾರ್ಯಾರಂಭಕ್ಕೆ ಉಳಿದಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಸದ ರಮೇಶ ಜಿಗಜಿಣಗಿ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾಗಿ ಮಹತ್ವದ ಸಮಾಲೋಚನೆ ನಡೆಸಿದರು.
ಸಂಸತ್ ಅಧಿವೇಶನದ ವೇಳೆ ನಡೆದ ಈ ಭೇಟಿಯಲ್ಲಿ, ವಿಜಯಪುರ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಅನುಮತಿ ಹಾಗೂ ಪರಿಸರ ಸಂಬಂಧಿತ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವಂತೆ ಜಿಗಜಿಣಗಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ಭೂಪೇಂದ್ರ ಯಾದವ್, ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಂಸದ ರಮೇಶ ಜಿಗಜಿಣಗಿ, ವಿಜಯಪುರ ವಿಮಾನ ನಿಲ್ದಾಣವು ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಕಾಮಗಾರಿಗೆ ಚಾಲನೆ ದೊರೆತಿತ್ತು ಎಂದು ಹೇಳಿದರು.
ಬಳಿಕ ಬಂದ ಸರ್ಕಾರಗಳ ಅವಧಿಯಲ್ಲಿ ಯೋಜನೆಗೆ ನಿರೀಕ್ಷಿತ ವೇಗ ಸಿಗಲಿಲ್ಲ. ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ವಿಮಾನ ನಿಲ್ದಾಣದ ಸುಮಾರು ಶೇ.90 ರಷ್ಟು ಕಾಮಗಾರಿ ಪೂರ್ಣಗೊಂಡಿತು. ಆದರೆ ಪರಿಸರ ಸಂಬಂಧಿತ ನಿರಪೇಕ್ಷಣಾ ಪತ್ರ (NOC) ಸೇರಿದಂತೆ ಕೆಲವು ತಾಂತ್ರಿಕ ಅಡಚಣೆಗಳು ಹಾಗೂ ನ್ಯಾಯಾಲಯದಲ್ಲಿ ಪ್ರಕರಣ ಇರುವ ಕಾರಣ ಉದ್ಘಾಟನೆ ವಿಳಂಬವಾಯಿತು ಎಂದು ವಿವರಿಸಿದರು.
ವಿಮಾನ ನಿಲ್ದಾಣ ಶೀಘ್ರ ಕಾರ್ಯಾರಂಭವಾಗುವಂತೆ ತಾವು ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಸಂಸತ್ತಿನಲ್ಲೂ ವಿಷಯ ಪ್ರಸ್ತಾಪಿಸಿರುವುದಾಗಿ ತಿಳಿಸಿದ ಜಿಗಜಿಣಗಿ, ಉಳಿದಿರುವ ತಾಂತ್ರಿಕ ಅಡೆತಡೆಗಳು ಶೀಘ್ರ ನಿವಾರಣೆಯಾಗಿ ವಿಜಯಪುರ ವಿಮಾನ ನಿಲ್ದಾಣ ಸಾರ್ವಜನಿಕ ಸೇವೆಗೆ ತೆರೆದುಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವಿಜಯಪುರ ವಿಮಾನ ನಿಲ್ದಾಣಕ್ಕೆ ಚುರುಕು: ಕೇಂದ್ರ ಸಚಿವರೊಂದಿಗೆ ಜಿಗಜಿಣಗಿ ಮಹತ್ವದ ಚರ್ಚೆ


