ಸಪ್ತಸಾಗರ ವಾರ್ತೆ, ವಿಜಯಪುರ,ಜು. 31:
ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ₹30 ಸಾವಿರ ವಾರ್ಷಿಕ ಆದಾಯ ಮಿತಿ ನಿಗದಿಪಡಿಸಿರುವ ಕ್ರಮವನ್ನು ಹಿಂಪಡೆದು, ಅದನ್ನು ಕನಿಷ್ಠ ₹35 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ(ರಿ) ರಾಜ್ಯಾಧ್ಯಕ್ಷ ಅಪ್ಪುರಾಜ್ ನಿಮಾದಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಂಧ್ಯಾ ಸುರಕ್ಷಾ ಯೋಜನೆ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ, ನಿರ್ಗತಿಕ ವಿಧವಾ ವೇತನ, ಅಂಗವಿಕಲರ ಪಿಂಚಣಿ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೆ ನಿಗದಿಪಡಿಸಿರುವ ₹30 ಸಾವಿರ ಆದಾಯ ಮಿತಿ ಇಂದಿನ ಬೆಲೆ ಏರಿಕೆ ಮತ್ತು ಜೀವನ ನಿರ್ವಹಣೆಯ ವೆಚ್ಚಕ್ಕೆ ಅನುಗುಣವಾಗಿಲ್ಲ ಎಂದು ಹೇಳಿದ್ದಾರೆ.
ಕಳೆದ ಐದು ತಿಂಗಳುಗಳಿಂದ ರಾಜ್ಯದ ಸಾವಿರಾರು ಫಲಾನುಭವಿಗಳ ಪಿಂಚಣಿಗಳು ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದ್ದು, ಮರು ಆರಂಭಕ್ಕೆ ಕಂದಾಯ ಇಲಾಖೆ ₹30 ಸಾವಿರ ಆದಾಯ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿದೆ. ಆದರೆ ಆದಾಯ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುವ ವೇಳೆ ಅನೇಕ ಫಲಾನುಭವಿಗಳಿಗೆ ₹35 ಸಾವಿರದಿಂದ ₹45 ಸಾವಿರದವರೆಗೆ ಆದಾಯ ನಮೂದಿಸಿ ಪ್ರಮಾಣಪತ್ರ ನೀಡಲಾಗುತ್ತಿದೆ. ಇದರಿಂದ ವೃದ್ಧರು, ವಿಧವೆಯರು ಹಾಗೂ ಅಂಗವಿಕಲರು ಪಿಂಚಣಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಅಲ್ಲದೆ, ಪಿಂಚಣಿ ಮರು ಆರಂಭಕ್ಕಾಗಿ ವಯೋವೃದ್ಧರು, ಅಂಗವಿಕಲರು ಹಾಗೂ ವಿಧವೆಯರು ತಹಸೀಲ್ದಾರ್ ಕಚೇರಿಗಳಿಗೆ ಪದೇ ಪದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಮಾನವೀಯ ದೃಷ್ಟಿಯಿಂದ ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಸ್ಥಗಿತಗೊಂಡಿರುವ ಎಲ್ಲಾ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಯಾವುದೇ ವಿಳಂಬವಿಲ್ಲದೆ ಮರು ಆರಂಭಿಸಬೇಕು. ಜೊತೆಗೆ ಆದಾಯ ಮಿತಿಯನ್ನು ಪರಿಷ್ಕರಿಸಿ ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಪಿಂಚಣಿ ವಿತರಣೆಯನ್ನು ಸುಗಮಗೊಳಿಸಬೇಕು ಎಂದು ಸರ್ಕಾರಕ್ಕೆ ಅವರು ಮನವಿ ಮಾಡಿದ್ದಾರೆ.
ಸರ್ಕಾರ ಈ ಸಮಸ್ಯೆಯನ್ನು ತಕ್ಷಣ ಪರಿಷ್ಕರಿಸದಿದ್ದರೆ, ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ(ರಿ) ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ರಾಜ್ಯಾಧ್ಯಕ್ಷ ಅಪ್ಪುರಾಜ್ ನಿಮಾದಾರ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಭದ್ರತಾ ಪಿಂಚಣಿಗೆ ₹30 ಸಾವಿರ ಆದಾಯ ಮಿತಿ ಹಿಂಪಡೆಯಿರಿ: ಅಪ್ಪುರಾಜ್ ನಿಮಾದಾರ ಆಗ್ರಹ


