ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರ್ಪಡೆ, ಸರ್ಕಾರಿ ಕಾಲೇಜು–ಆರೋಗ್ಯ ಕೇಂದ್ರ ಸ್ಥಾಪನೆಗೆ ಒತ್ತಾಯ; ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ಎಚ್ಚರಿಕೆ
ಸಪ್ತಸಾಗರ ವಾರ್ತೆ,ವಿಜಯಪುರ, ಆ.1: ಜಗಜ್ಯೋತಿ ಬಸವೇಶ್ವರರ ಜನ್ಮಭೂಮಿ ಇಂಗಳೇಶ್ವರ ಗ್ರಾಮ ಇಂದಿಗೂ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಗ್ರಾಮವನ್ನು ತಕ್ಷಣವೇ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿಸಿ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ತಿಂಗಳಿನಿಂದ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ ಎಂದು ಗ್ರಾಮದ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಅರವಿಂದ ಕುಲಕರ್ಣಿ, ಬಸವೇಶ್ವರರ ಜನ್ಮಸ್ಥಳವಾಗಿರುವ ಇಂಗಳೇಶ್ವರಕ್ಕೆ ಇತಿಹಾಸದ ಮಹತ್ವವಿದ್ದರೂ ಅಭಿವೃದ್ಧಿಯ ವಿಚಾರದಲ್ಲಿ ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ ಎಂದು ಆರೋಪಿಸಿದರು.
ಗ್ರಾಮದಲ್ಲಿ ಹತ್ತನೇ ತರಗತಿವರೆಗೆ ಮಾತ್ರ ಸರ್ಕಾರಿ ಶಿಕ್ಷಣ ವ್ಯವಸ್ಥೆ ಇದ್ದು, ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಹೊರ ಊರುಗಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ದುಬಾರಿ ಶುಲ್ಕದಿಂದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಪದವಿಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜುಗಳನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಸುಮಾರು 14 ರಿಂದ 15 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮಕ್ಕೆ ಇಂದಿಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ತುರ್ತು ಆರೋಗ್ಯ ಸಮಸ್ಯೆ ಎದುರಾದರೆ ಬಸವನ ಬಾಗೇವಾಡಿ ಅಥವಾ ವಿಜಯಪುರಕ್ಕೆ ತೆರಳಬೇಕಾದ ಅನಿವಾರ್ಯತೆ ಇದ್ದು, ಇದರಿಂದ ಅಮೂಲ್ಯ ಜೀವಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಸವಣ್ಣ ಹಾಗೂ ಇತರ ಶರಣರ ಕ್ಷೇತ್ರಗಳ ಅಭಿವೃದ್ಧಿಗಾಗಿ ರಚಿಸಲಾದ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಇಂಗಳೇಶ್ವರ ಸೇರಿದಂತೆ ತಂಗಡಗಿ, ದೇವರ ಹಿಪ್ಪರಗಿ, ಮಸಬಿನಾಳ, ದೇಗಿನಾಳ ಮೊದಲಾದ ಶರಣರ ಕ್ಷೇತ್ರಗಳನ್ನು ಸೇರಿಸಿ ಸಮಗ್ರ ಅಭಿವೃದ್ಧಿ ಕೈಗೊಳ್ಳಬೇಕು. ಶರಣರ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸ್ಮಾರಕಗಳ ನಿರ್ಮಾಣಕ್ಕೂ ಸರ್ಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ಇಂಗಳೇಶ್ವರ ಬಸ್ ನಿಲ್ದಾಣದ ಆವರಣದಲ್ಲಿರುವ ಬಸವೇಶ್ವರರ ಸಿಮೆಂಟ್ ಪ್ರತಿಮೆ ಸಂಪೂರ್ಣ ಜೀರ್ಣಾವಸ್ಥೆಗೆ ತಲುಪಿದೆ. ಈ ಹಿಂದೆ ಸರ್ಕಾರ ₹5 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಅಶ್ವಾರೂಢ ಪಂಚಲೋಹದ ಬಸವೇಶ್ವರರ ಪ್ರತಿಮೆ ನಿರ್ಮಿಸುವುದಾಗಿ ಘೋಷಿಸಲಾಗಿತ್ತು. ಆದರೆ ಕಾಮಗಾರಿ ಯಾವ ಹಂತದಲ್ಲಿದೆ ಹಾಗೂ ಯಾವ ಇಲಾಖೆಗೆ ವಹಿಸಲಾಗಿದೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಕೂಡಲೇ ಪ್ರತಿಮೆ ನಿರ್ಮಾಣ ಕಾರ್ಯ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಇದೇ ರೀತಿಯ ನಿರ್ಲಕ್ಷ್ಯ ಮುಂದುವರಿಸಿದರೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಧರಣಿ ಹಾಗೂ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ದತ್ತಾತ್ರೇಯ ಕುಲಕರ್ಣಿ, ರೇವಣಸಿದ್ಧ ಐಗಳಿ, ಸೋಮು ದೇವರ, ಗಿರೀಶ ಕುಲಕರ್ಣಿ, ನಾಗಪ್ಪ ಚಿಗರಿ ಹಾಗೂ ಅಶೋಕ ಕುಲಕರ್ಣಿ ಉಪಸ್ಥಿತರಿದ್ದರು.


