ಬೇರುಮಟ್ಟದ ಸಮೀಕ್ಷೆ ಮೂಲಕ ಕಾಂಗ್ರೆಸ್ ಪುನರ್‌ಸಂಘಟನೆ: ಸಚಿನ್ ಯಾದವ್

ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾ ಸಮಿತಿ ಪುನರ್‌ರಚನೆಗೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ; ಸಮಗ್ರ ವರದಿ ಎಐಸಿಸಿಗೆ

ಸಪ್ತಸಾಗರ ವಾರ್ತೆ,ವಿಜಯಪುರ, ಆ.1: ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಂಘಟನೆಯನ್ನು ಬೇರುಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ಕಾರ್ಯಕರ್ತರ ಸಲಹೆ, ಸಮಾಲೋಚನೆ ಹಾಗೂ ಅಭಿಪ್ರಾಯ ಸಂಗ್ರಹಿಸಿ ಸಮಗ್ರ ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ಮಧ್ಯಪ್ರದೇಶದ ಶಾಸಕ ಹಾಗೂ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಂಘಟನೆಗೆ ಎಐಸಿಸಿ ನೇಮಿಸಿರುವ ಉಸ್ತುವಾರಿ ಸಚಿನ್ ಯಾದವ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಂಘಟನೆಗೆ ಸಂಬಂಧಿಸಿದಂತೆ ಎಐಸಿಸಿ ಮಹತ್ವದ ಜವಾಬ್ದಾರಿಯನ್ನು ವಹಿಸಿದ್ದು, ಜಿಲ್ಲಾಧ್ಯಕ್ಷರ ನೇಮಕ ಸೇರಿದಂತೆ ಜಿಲ್ಲಾ ಸಂಘಟನೆಯ ಪುನರ್‌ರಚನೆ ಪ್ರಕ್ರಿಯೆಯ ಉಸ್ತುವಾರಿಯನ್ನು ತಮಗೆ ನೀಡಲಾಗಿದೆ ಎಂದು ಹೇಳಿದರು.
ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಬ್ಲಾಕ್, ಬೂತ್ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರು, ಮುಖಂಡರು ಮತ್ತು ಪದಾಧಿಕಾರಿಗಳೊಂದಿಗೆ ನೇರ ಸಮಾಲೋಚನೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಲಾಗುವುದು. ಬೇರುಮಟ್ಟದ ವಾಸ್ತವ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಸಂಘಟನೆಯ ಪುನರ್‌ಸಂಘಟನೆಗೆ ಅಗತ್ಯವಾದ ವರದಿ ಸಿದ್ಧಪಡಿಸಿ ಎಐಸಿಸಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ವರದಿಯ ಆಧಾರದ ಮೇಲೆ ಎಐಸಿಸಿ ಅಂತಿಮ ನಿರ್ಧಾರ ಕೈಗೊಂಡು ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳ ನೇಮಕಕ್ಕೆ ಅನುಮೋದನೆ ನೀಡಲಿದೆ. ಕಾಂಗ್ರೆಸ್‌ನ ತತ್ವ, ಸಿದ್ಧಾಂತ ಮತ್ತು ಜನಪರ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುವವರಿಗೆ ಸಂಘಟನೆಯಲ್ಲಿ ಸೂಕ್ತ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಸಮೀಕ್ಷೆ ಮತ್ತು ಅಧ್ಯಯನ ನಡೆಯುತ್ತಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ಮಾಜಿ ಶಾಸಕ ಡಾ. ಮಕ್ಬೂಲ್ ಬಾಗವಾನ, ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್, ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವಸಂತ ಹೋನಮೋಡೆ ಉಪಸ್ಥಿತರಿದ್ದರು.

Share this