ವ್ಯಸನವೇ ಭವಿಷ್ಯಕ್ಕೆ ಮಾರಕ; ದುಶ್ಚಟಗಳಿಂದ ದೂರವಿದ್ದು ಬದುಕು ಕಟ್ಟಿಕೊಳ್ಳಿ: ಡಿಎಚ್‌ಒ ಡಾ. ಮಲ್ಲನಗೌಡ ಬಿರಾದಾರ

ಸಪ್ತಸಾಗರ ವಾರ್ತೆ,ವಿಜಯಪುರ, ಆ.1: ಯುವಜನತೆ ಯಾವುದೇ ರೀತಿಯ ವ್ಯಸನಗಳ ಜಾಲಕ್ಕೆ ಸಿಲುಕದೆ ಆರೋಗ್ಯ, ಶಿಕ್ಷಣ, ಸಂಸ್ಕಾರ ಮತ್ತು ಜೀವನ ಮೌಲ್ಯಗಳಿಗೆ ಆದ್ಯತೆ ನೀಡಿ ದೇಶಕ್ಕೆ ಮಾದರಿಯಾಗುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಲ್ಲನಗೌಡ ಬಿರಾದಾರ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಮ.ನಿ.ಪ್ರ. ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಶನಿವಾರ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನವು ವ್ಯಕ್ತಿತ್ವ ನಿರ್ಮಾಣದ ಸುವರ್ಣ ಕಾಲವಾಗಿದ್ದು, ಇದೇ ಹಂತದಲ್ಲಿ ತಂಬಾಕು, ಗುಟ್ಕಾ, ಮದ್ಯಪಾನ ಹಾಗೂ ಇತರ ಮಾದಕ ವ್ಯಸನಗಳಿಗೆ ಬಲಿಯಾಗುವುದು ಜೀವನದ ದಿಕ್ಕನ್ನೇ ಬದಲಾಯಿಸಬಹುದು. ಇಂತಹ ದುಶ್ಚಟಗಳು ದೈಹಿಕ ಆರೋಗ್ಯವಷ್ಟೇ ಅಲ್ಲದೆ ಮಾನಸಿಕ ಸ್ಥೈರ್ಯ, ಕುಟುಂಬದ ನೆಮ್ಮದಿ ಹಾಗೂ ಸಮಾಜದ ಮೇಲೆ ಗಂಭೀರ ದುಷ್ಪರಿಣಾಮ ಉಂಟುಮಾಡುತ್ತವೆ. ಆದ್ದರಿಂದ ಯುವಕರು ಕ್ರೀಡೆ, ಯೋಗ, ವ್ಯಾಯಾಮ ಮತ್ತು ಶಿಸ್ತಿನ ಜೀವನಶೈಲಿಯನ್ನು ಅಳವಡಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪಾಲುದಾರರಾಗಬೇಕು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಮಾತನಾಡಿ, ಇಂದಿನ ಯುವಜನತೆ ಮದ್ಯ, ತಂಬಾಕು ಮತ್ತು ಮಾದಕ ವಸ್ತುಗಳಷ್ಟೇ ಅಲ್ಲದೆ ಮೊಬೈಲ್ ಫೋನ್ ವ್ಯಸನದಿಂದಲೂ ಎಚ್ಚರಿಕೆಯಿಂದಿರಬೇಕು. ತಂತ್ರಜ್ಞಾನವನ್ನು ಅಗತ್ಯಕ್ಕೆ ಮಾತ್ರ ಬಳಸಿಕೊಂಡು ಸಮಯದ ಸದ್ಬಳಕೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಬಿ. ಗಂಗನಹಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನಶೀಲತೆ, ಶಿಸ್ತು ಮತ್ತು ಉತ್ತಮ ನಡವಳಿಕೆಯನ್ನು ಮೈಗೂಡಿಸಿಕೊಂಡು ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಉತ್ತಮ ನಾಗರಿಕರಾಗಿ ಸಮಾಜಕ್ಕೆ ಮಾದರಿಯಾಗಲು ಸಾಧ್ಯ ಎಂದು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ವಿದ್ಯಾರ್ಥಿಗಳಿಗೆ ವ್ಯಸನಮುಕ್ತ ಜೀವನದ ಪ್ರತಿಜ್ಞಾವಿಧಿ ಬೋಧಿಸಿ, ದೈಹಿಕ ಹಾಗೂ ಮಾನಸಿಕವಾಗಿ ಸದೃಢ ಯುವಕರೇ ರಾಷ್ಟ್ರದ ಅಮೂಲ್ಯ ಸಂಪತ್ತಾಗಿದ್ದಾರೆ ಎಂದು ಹೇಳಿದರು.
ಮನೋವೈದ್ಯ ಡಾ. ಮಂಜುನಾಥ ಮಸಳಿ ವಿಶೇಷ ಉಪನ್ಯಾಸ ನೀಡಿ, ಮಾದಕ ವ್ಯಸನಗಳು ದೇಹ, ಮೆದುಳು, ಕುಟುಂಬ ಹಾಗೂ ಸಾಮಾಜಿಕ ಬದುಕಿನ ಮೇಲೆ ಉಂಟುಮಾಡುವ ದುಷ್ಪರಿಣಾಮಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದರು. ಯಾವುದೇ ವ್ಯಸನದ ಆರಂಭವನ್ನೇ ತಡೆಯುವುದು ಅದರಿಂದ ಸಂಪೂರ್ಣ ಮುಕ್ತರಾಗುವ ಅತ್ಯುತ್ತಮ ಮಾರ್ಗ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಜಿಲ್ಲಾ ಪಂಚಾಯಿತಿಯ ಸಹಾಯಕ ನಿರ್ದೇಶಕ ಡಿ.ಬಿ. ಮೆಂದಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಬೋವಿ, ಉಪನ್ಯಾಸಕರಾದ ಎಸ್.ಐ. ಸುರಪೂರ, ಹಣಮಂತ ಪೂಜಾರಿ, ಸಿ.ಎಸ್. ಪೂಜಾರಿ, ಎಸ್.ಐ. ಸವಳಿ, ಎಸ್.ಬಿ. ಕಲ್ಯಾಣಿ, ಜೆ.ಎಂ. ಸಾಲೋಟಗಿ, ಎಸ್.ಪಿ. ಧನ್ಯಾಳ, ಸಂಗಮೇಶ ತೇಲಿ, ವಾರ್ತಾ ಇಲಾಖೆಯ ವಿಜಯ ಕೃಷ್ಣ, ವೈಷ್ಣವಿ ಭಗವತಿ, ಮಿಥುನ ಬನಸೋಡೆ, ನಾಗರಾಜ ಸಾಗರ, ರತ್ನಾಂಜಲಿ ವಾಲೀಕಾರ, ಲಕ್ಷ್ಮಣ, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this