ತಿಕೋಟ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ ಗೊಂದಲ:ಪರೀಕ್ಷಾ ಮಂಡಳಿಗೆ ವರದಿ ಸಲ್ಲಿಕೆ-ಡಿಸಿ ಆನಂದ ಕೆ.

ಸಪ್ತಸಾಗರ ವಾರ್ತೆ,ವಿಜಯಪುರ, ಆ.2:
ವಿಜಯಪುರ ಜಿಲ್ಲೆಯ ತಿಕೋಟ ಪಟ್ಟಣದ ಶಾರದಾಂಬಾ ಶಿಕ್ಷಣ ಸಂಸ್ಥೆಯಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಲಿಖಿತ ಪರೀಕ್ಷಾ ಕೇಂದ್ರದಲ್ಲಿ ಭಾನುವಾರ ಕೆಲಕಾಲ ಗೊಂದಲ ಉಂಟಾಯಿತು. ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಶೀಟ್‌ನ ಕ್ರಮಸಂಖ್ಯೆ ಹೊಂದಿಕೆಯಾಗಿಲ್ಲ ಎಂದು ಆರೋಪಿಸಿ ಕೆಲ ಪರೀಕ್ಷಾರ್ಥಿಗಳು ಪರೀಕ್ಷೆಯನ್ನು ಬಹಿಷ್ಕರಿಸಿ ಒಎಂಆರ್ ಶೀಟ್ ಮತ್ತು ಪ್ರಶ್ನೆ ಪತ್ರಿಕೆಗಳೊಂದಿಗೆ ಕೇಂದ್ರದ ಹೊರಗೆ ಬಂದು ಪ್ರತಿಭಟನೆ ನಡೆಸಿದರು.
ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಸ್ಪಷ್ಟನೆ ನೀಡಿ, ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಶೀಟ್‌ಗಳನ್ನು ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲಾಗಿದ್ದು, ಕಾನೂನು ಪ್ರಕ್ರಿಯೆಯಂತೆ ಅಭ್ಯರ್ಥಿಗಳ ಸಮ್ಮುಖದಲ್ಲೇ ಸೀಲ್ ತೆರೆಯಲಾಗಿದೆ ಎಂದು ಹೇಳಿದರು.
ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್ ಶೀಟ್‌ನ ಕ್ರಮಸಂಖ್ಯೆ ಒಂದೇ ಇರಬೇಕೆಂಬ ನಿಯಮವಿಲ್ಲ. ಅಭ್ಯರ್ಥಿಗಳು ತಮ್ಮ ಒಎಂಆರ್ ಶೀಟ್‌ನಲ್ಲಿ ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ಅನ್ನು ನಮೂದಿಸಿ ಪರೀಕ್ಷೆ ಮುಂದುವರಿಸಬಹುದಿತ್ತು. ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್ ಶೀಟ್‌ಗೆ ಟ್ಯಾಗಿಂಗ್ ಅಥವಾ ಬಾಂಡಿಂಗ್ ವ್ಯವಸ್ಥೆ ಇರುವುದಿಲ್ಲ ಎಂದು ಅವರು ವಿವರಿಸಿದರು.
ಆದರೆ ಕೆಲ ಅಭ್ಯರ್ಥಿಗಳು ತಪ್ಪು ಕಲ್ಪನೆಯಿಂದ ಪರೀಕ್ಷೆ ಬರೆಯದೇ ಕೇಂದ್ರದಿಂದ ಹೊರಗೆ ಬಂದಿದ್ದಾರೆ. ಕೇಂದ್ರದ ಮುಖ್ಯಸ್ಥರು ಮನವರಿಕೆ ಮಾಡಿದರೂ ಅವರು ಆವರಣದ ಹೊರಗೆ ತೆರಳಿದ್ದಾರೆ. ಪರೀಕ್ಷಾ ನಿಯಮಾವಳಿಯ ಪ್ರಕಾರ ಒಮ್ಮೆ ಪರೀಕ್ಷಾ ಕೊಠಡಿಯಿಂದ ಹೊರ ಬಂದ ನಂತರ ಮತ್ತೆ ಒಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಕೊನೆಯ ಗಂಟೆ ಬಾರುವವರೆಗೆ ಯಾವುದೇ ಅಭ್ಯರ್ಥಿ ಪರೀಕ್ಷಾ ಕೇಂದ್ರದಿಂದ ಹೊರಬರಬಾರದು ಎಂಬ ಸ್ಪಷ್ಟ ಸೂಚನೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪರೀಕ್ಷಾ ಕೇಂದ್ರದಲ್ಲಿ 115ಕ್ಕೂ ಹೆಚ್ಚು ಅಭ್ಯರ್ಥಿಗಳು ಯಾವುದೇ ಅಡೆತಡೆಯಿಲ್ಲದೆ ಪರೀಕ್ಷೆ ಬರೆದಿದ್ದಾರೆ. ಹೊರಗೆ ಹೋದ ಕೆಲ ಅಭ್ಯರ್ಥಿಗಳು ನಂತರ ಮತ್ತೆ ಪರೀಕ್ಷೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರೂ, ನಿಯಮಾನುಸಾರ ಅದಕ್ಕೆ ಅವಕಾಶ ನೀಡಲಾಗಲಿಲ್ಲ.
ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಎಲ್ಲಾ ವಿವರಗಳ ವರದಿಯನ್ನು ಪರೀಕ್ಷಾ ಮಂಡಳಿಗೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ತಿಳಿಸಿದ್ದಾರೆ.

Share this