ಸಪ್ತಸಾಗರ ವಾರ್ತೆ,ವಿಜಯಪುರ, ಆ.2: ತಿಕೋಟಾದಲ್ಲಿ ನಡೆದ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಅವ್ಯವಸ್ಥೆ ಹಾಗೂ ಪ್ರತಿಭಟನಾ ನಿರತ ಅಭ್ಯರ್ಥಿಗಳ ಮೇಲೆ ನಡೆದಿರುವುದಾಗಿ ಆರೋಪಿಸಲಾದ ಲಾಠಿ ಪ್ರಹಾರ ಪ್ರಕರಣ ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ಪ್ರತೀಕವಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು. ಈ ಘಟನೆಗೆ ನೈತಿಕ ಹೊಣೆ ಹೊತ್ತು ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾವಯವ ಬೀಜ ಪ್ರಮಾಣನ ಸಂಸ್ಥೆಯ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿನಿಧಿಸುವ ಕ್ಷೇತ್ರದಲ್ಲೇ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಗಂಭೀರ ಗೊಂದಲ ಉಂಟಾಗಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ತಿಕೋಟಾದ ಶಾರದಾಂಬಾ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ವಿಳಂಬ ಹಾಗೂ ಓಎಂಆರ್ ಶೀಟ್ ಸಂಬಂಧ ಉಂಟಾದ ಗೊಂದಲದ ಬಗ್ಗೆ ಅಭ್ಯರ್ಥಿಗಳು ಪ್ರಶ್ನಿಸಿದಾಗ, ಸಮಸ್ಯೆ ಬಗೆಹರಿಸುವ ಬದಲು ಅವರ ಮೇಲೆಯೇ ಲಾಠಿ ಪ್ರಹಾರ ನಡೆಸಿ ಬಲವಂತವಾಗಿ ವಶಕ್ಕೆ ಪಡೆದು ಬೇರೆಡೆ ಕರೆದೊಯ್ದಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ನೀಟ್ ಪರೀಕ್ಷೆ ವಿಷಯದಲ್ಲಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದ ಕಾಂಗ್ರೆಸ್ ನಾಯಕರು, ಈಗ ರಾಜ್ಯದಲ್ಲಿ ನಡೆದಿರುವ ಪೊಲೀಸ್ ನೇಮಕಾತಿ ಪರೀಕ್ಷೆಯ ಅವ್ಯವಸ್ಥೆ ಕುರಿತು ಮೌನ ಏಕೆ ಎಂಬುದಕ್ಕೆ ಉತ್ತರ ನೀಡಬೇಕು ಎಂದು ಪ್ರಶ್ನಿಸಿದರು.
ಪೊಲೀಸ್ ನೇಮಕಾತಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವ ಬದಲು ಅವರ ಮೇಲೆಯೇ ಬಲಪ್ರಯೋಗ ನಡೆಸಿರುವುದು ಖಂಡನೀಯ. ಈ ಪ್ರಕರಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು.
‘ಜೆನ್–ಜಿ’ ಯುವಕರು ಧ್ವನಿ ಎತ್ತಬೇಕು
ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿ, ತಿಕೋಟಾ ಮಾತ್ರವಲ್ಲದೆ ರಾಜ್ಯದ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಗೊಂದಲಗಳು ವರದಿಯಾಗಿವೆ. ಹೀಗಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಬಂಧಿತ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧ ಧ್ವನಿ ಎತ್ತಿದ್ದ ಯುವಜನತೆ, ಈಗ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿನ ಅವ್ಯವಸ್ಥೆಯ ವಿರುದ್ಧವೂ ಹೋರಾಟ ನಡೆಸಬೇಕು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಎದುರು ಬಿಜೆಪಿ ವತಿಯಿಂದ ಉಗ್ರ ಪ್ರತಿಭಟನೆ ಹಾಗೂ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಬಲೇಶ್ವರ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಕುರದಡ್ಡಿ, ಬಸವರಾಜ ಬಿರಾದಾರ, ವಿಜಯ ಜೋಶಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.


