ಮಹಿಳೆಯರಿಗೆ ಶೂನ್ಯ ಸ್ಥಾನ, ವಿಜಯಪುರಕ್ಕೂ ನಿರಾಸೆ: ಸಚಿವ ಸಂಪುಟ ವಿಸ್ತರಣೆ ವಿರುದ್ಧ ಆಪ್ ವಾಗ್ದಾಳಿ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 4: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರಿಗೆ ಒಂದೇ ಒಂದು ಸಚಿವ ಸ್ಥಾನವನ್ನೂ ನೀಡದಿರುವುದು, ಭ್ರಷ್ಟಾಚಾರದ ಆರೋಪ ಎದುರಿಸಿದ್ದ ನಾಯಕರಿಗೆ ಮತ್ತೆ ಅವಕಾಶ ಕಲ್ಪಿಸಿರುವುದು ಹಾಗೂ ವಿಜಯಪುರ ಜಿಲ್ಲೆಗೆ ಹೆಚ್ಚುವರಿ ಪ್ರಾತಿನಿಧ್ಯ ನೀಡದಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವನ್ನು ಬಯಲಿಗೆಳೆದಿದೆ ಎಂದು ಆಮ್ ಆದ್ಮಿ ಪಕ್ಷದ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಸಬಲೀಕರಣದ ಬಗ್ಗೆ ವೇದಿಕೆಗಳಲ್ಲಿ ಮಾತನಾಡುವ ಕಾಂಗ್ರೆಸ್, ಅಧಿಕಾರ ಹಂಚಿಕೆಯ ಸಂದರ್ಭದಲ್ಲಿ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಟೀಕಿಸಿದರು. ರಾಜ್ಯದ ಜನಸಂಖ್ಯೆಯ ಅರ್ಧ ಭಾಗ ಮಹಿಳೆಯರದ್ದಾಗಿದ್ದರೂ ಸಚಿವ ಸಂಪುಟದಲ್ಲಿ ಅವರಿಗೆ ಅವಕಾಶ ನೀಡದಿರುವುದು ಸರ್ಕಾರದ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ವಾಲ್ಮೀಕಿ ನಿಗಮ ಹಗರಣದ ಆರೋಪದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವುದು ಭ್ರಷ್ಟಾಚಾರಕ್ಕೆ ರಾಜಕೀಯ ಆಶ್ರಯ ನೀಡಿದಂತಾಗಿದೆ. ಇದು ಸರ್ಕಾರದ ನೈತಿಕ ಬದ್ಧತೆಯ ಮೇಲೆಯೇ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಆರೋಪಿಸಿದರು.
ವಿಜಯಪುರ ಜಿಲ್ಲೆಗೆ ಮತ್ತೊಮ್ಮೆ ಹೆಚ್ಚುವರಿ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿದ ಅವರು, ಕೃಷಿ, ನೀರಾವರಿ, ಕೈಗಾರಿಕೆ, ಶಿಕ್ಷಣ, ಉದ್ಯೋಗ ಹಾಗೂ ಮೂಲಸೌಕರ್ಯ ಸೇರಿದಂತೆ ಹಲವು ಸಮಸ್ಯೆಗಳಿರುವ ಜಿಲ್ಲೆಗೆ ಸಮರ್ಪಕ ಪ್ರಾತಿನಿಧ್ಯ ಸಿಗದಿರುವುದು ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದರು.
ಉತ್ತರ ಕರ್ನಾಟಕಕ್ಕೂ ಸಮರ್ಪಕ ಸ್ಥಾನಮಾನ ನೀಡದಿರುವುದು ಪ್ರಾದೇಶಿಕ ಸಮತೋಲನವನ್ನು ಕಡೆಗಣಿಸಿದ ಕ್ರಮವಾಗಿದೆ ಎಂದು ಹೇಳಿದರು.
ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಪ್ರಮುಖ ಹುದ್ದೆಗಳ ಆಯ್ಕೆಯಲ್ಲಿಯೂ ಚುನಾಯಿತ ಸದಸ್ಯರ ಅಭಿಪ್ರಾಯಕ್ಕಿಂತ ಹೈಕಮಾಂಡ್‌ನ ನಿರ್ಧಾರವೇ ಮೇಲುಗೈ ಸಾಧಿಸುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಭೋಗೇಶ್ ಸೋಲಾಪುರ್ ಟೀಕಿಸಿದರು.
ಕರ್ನಾಟಕದ ಜನರು ಮಹಿಳೆಯರಿಗೆ ನ್ಯಾಯ, ಪ್ರಾಮಾಣಿಕ ಆಡಳಿತ ಹಾಗೂ ಎಲ್ಲ ಪ್ರದೇಶಗಳಿಗೆ ಸಮಾನ ಪ್ರಾತಿನಿಧ್ಯವನ್ನು ಬಯಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅಧಿಕಾರ ಕೇಂದ್ರೀಕೃತ ರಾಜಕಾರಣಕ್ಕೆ ಜನರು ಪ್ರಜಾಪ್ರಭುತ್ವದ ಮೂಲಕವೇ ಉತ್ತರ ನೀಡಲಿದ್ದಾರೆ ಎಂದು ಅವರು ಹೇಳಿದರು.

Share this