ಸಪ್ತಸಾಗರ ವಾರ್ತೆ,ತಿಕೋಟಾ, ಆ.5: ರಾಷ್ಟ್ರಧ್ವಜವು ಭಾರತದ ಸ್ವಾತಂತ್ರ್ಯ, ತ್ಯಾಗ, ಶಾಂತಿ, ಸತ್ಯ ಹಾಗೂ ಸಮೃದ್ಧಿಯ ಪ್ರತೀಕವಾಗಿದ್ದು, ಅದಕ್ಕೆ ಗೌರವ ಸಲ್ಲಿಸುವುದೇ ನಿಜವಾದ ದೇಶಸೇವೆ ಎಂದು ಪ್ರೊ. ದೊಡ್ಡಣ್ಣ ಬಜಂತ್ರಿ ಹೇಳಿದರು.
ಪಟ್ಟಣದ ಬಿ.ಎಲ್.ಡಿ.ಇ. ನ್ಯೂ ಆರ್ಟ್ಸ್ ಕಾಲೇಜಿನಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ವಿಜಯಪುರದ ಅಧ್ಯಕ್ಷ ರವಿ ಕಿತ್ತೂರ ಹಾಗೂ ವಿಭಾಗೀಯ ಸಂಯೋಜಕ ಮೋಹನ ಕಟ್ಟಿಮನಿ ಅವರ ಆಯೋಜನೆಯಲ್ಲಿ, ಮಹಾವಿದ್ಯಾಲಯದ ಐಕ್ಯೂಎಸಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಭಾರತ ಸೇವಾದಳ ವಿಜಯಪುರ ಇವರ ಸಹಯೋಗದಲ್ಲಿ ರಾಷ್ಟ್ರಧ್ವಜ ಪ್ರಾತ್ಯಕ್ಷಿಕೆ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತ್ರಿವರ್ಣ ಧ್ವಜವು ಭಾರತದ ಅಸ್ಮಿತೆ ಮತ್ತು ಏಕತೆಯ ಸಂಕೇತವಾಗಿದೆ. ರಾಷ್ಟ್ರಧ್ವಜದ ಘನತೆ ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ನಾಗೇಶ ಡೋಣೂರ ಅವರು ರಾಷ್ಟ್ರಧ್ವಜ ಬಳಕೆ ಕುರಿತು ಸಂವಿಧಾನಾತ್ಮಕ ನಿಯಮಗಳು ಮತ್ತು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಾಯೋಗಿಕವಾಗಿ ವಿವರಿಸಿದರು. ರಾಷ್ಟ್ರಧ್ವಜವು ದೇಶದ ಅತ್ಯುನ್ನತ ಗೌರವದ ಸಂಕೇತವಾಗಿದ್ದು, ಅದನ್ನು ಗೌರವಪೂರ್ವಕವಾಗಿ ಬಳಸಬೇಕು. ದೇಶಕ್ಕಾಗಿ ಹುತಾತ್ಮರಾದವರ ಪಾರ್ಥಿವ ಶರೀರದ ಮೇಲಷ್ಟೇ ರಾಷ್ಟ್ರಧ್ವಜ ಹೊದಿಸುವ ಸಂಪ್ರದಾಯವಿದ್ದು, ಸಾಮಾನ್ಯ ನಾಗರಿಕರು ಅಥವಾ ರಾಜಕೀಯ ವ್ಯಕ್ತಿಗಳ ಶವಗಳ ಮೇಲೆ ರಾಷ್ಟ್ರಧ್ವಜ ಹೊದಿಸುವುದು ಸಂವಿಧಾನಾತ್ಮಕವಾಗಿ ಸಮಂಜಸವಲ್ಲ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪಿ.ಎಸ್. ತೋಳನೂರ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಪ್ರೊ. ಬಿ.ಎಸ್. ಬೆಳಗಲಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಯೋಜಕ ಪ್ರೊ. ಎಸ್.ಎಲ್. ರಾಠೋಡ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಡಾ. ಸಂತೋಷ ನವಲಗುಂದ ನಿರೂಪಿಸಿ, ಪ್ರೊ. ಸುಶಾಂತ ಜವನಾರ ವಂದಿಸಿದರು.
ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ: ಪ್ರೊ. ದೊಡ್ಡಣ್ಣ ಬಜಂತ್ರಿ


