ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣ ನೀತಿ ವಿರೋಧಿಸಿ ಮನವಿ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 7:
ಸರ್ಕಾರಿ ಶಾಲೆಗಳಲ್ಲಿ ಜಾರಿಗೊಳಿಸಿರುವ ದ್ವಿಭಾಷಾ ಶಿಕ್ಷಣ ನೀತಿ ಹಾಗೂ ಶಿಕ್ಷಕರ ನೇಮಕಾತಿ ಕರಡು ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಪರಿಷತ್‌ನ ಸಹ ಕಾರ್ಯದರ್ಶಿ ಮಯೂರಕುಮಾರ ತಿಳಗೂಳಕರ ಮಾತನಾಡಿ, ರಾಜ್ಯ ಸರ್ಕಾರವು ಈ ಶೈಕ್ಷಣಿಕ ವರ್ಷದಿಂದ 15 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಐದನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ಬೋಧನೆ ನಡೆಸುವ ದ್ವಿಭಾಷಾ ಶಿಕ್ಷಣ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಇದರ ಅನುಷ್ಠಾನದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತಿವೆ ಎಂದು ಆರೋಪಿಸಿದರು.
ಕನ್ನಡ ಮಾಧ್ಯಮ ಶಿಕ್ಷಕರಿಗೆ ಕೇವಲ ಐದು ದಿನಗಳ ತರಬೇತಿ ನೀಡಿ ಆಂಗ್ಲ ಮಾಧ್ಯಮದಲ್ಲಿ ಬೋಧನೆಗೆ ಸಜ್ಜುಗೊಳಿಸಿರುವುದು ಸಮರ್ಪಕವಲ್ಲ. ಪಠ್ಯಪುಸ್ತಕಗಳು ಎರಡೂ ಭಾಷೆಗಳಲ್ಲಿ ಲಭ್ಯವಿದ್ದರೂ, ಕೆಲವು ಅಧ್ಯಾಯಗಳು ಹಾಗೂ ಹಾಡುಗಳು ಕೇವಲ ಆಂಗ್ಲ ಭಾಷೆಯಲ್ಲೇ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಹೇಳಿದರು.
ಪರೀಕ್ಷೆಗಳಲ್ಲಿ ಸರಿಯಾದ ಉತ್ತರವನ್ನು ಆಂಗ್ಲ ಭಾಷೆಯಲ್ಲಿ ಬರೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರೇಣ್ಯಾಂಕ ಮತ್ತು ಕನ್ನಡದಲ್ಲಿ ಬರೆದವರಿಗೆ ಕಡಿಮೆ ಶ್ರೇಣ್ಯಾಂಕ ನೀಡುವಂತೆ ಸೂಚಿಸಿರುವುದು ಕನ್ನಡ ಭಾಷೆಯನ್ನು ಕಡೆಗಣಿಸುವ ಕ್ರಮವಾಗಿದೆ ಎಂದು ಅವರು ದೂರಿದರು.
ಇದಲ್ಲದೆ, ಶಾಲಾ ಶಿಕ್ಷಣ ಇಲಾಖೆ 15 ಸಾವಿರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಕರಡು ಅಧಿಸೂಚನೆಯಲ್ಲಿ ಕನ್ನಡ ಶಿಕ್ಷಕರ ಹುದ್ದೆಗಳನ್ನು ಸೇರಿಸದೇ ಇರುವುದನ್ನು ಪ್ರಶ್ನಿಸಿದ ಅವರು, ವಿಜ್ಞಾನ, ಗಣಿತ ಸೇರಿದಂತೆ ಎಲ್ಲಾ ವಿಷಯಗಳ ಶಿಕ್ಷಕರ ನೇಮಕಾತಿಗೆ ಆಂಗ್ಲ ಭಾಷಾ ಪ್ರಾವೀಣ್ಯತೆಯನ್ನು ಕಡ್ಡಾಯಗೊಳಿಸಿರುವುದೂ ಕನ್ನಡ ಭಾಷೆಯ ಹಿತಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವಿವೇಕ ಕುಲಕರ್ಣಿ ಮಾತನಾಡಿ, ದ್ವಿಭಾಷಾ ಶಿಕ್ಷಣ ನೀತಿಯು ಕನ್ನಡ ಭಾಷೆಯ ಉಳಿವಿಗೆ ಮಾರಕವಾಗಿದ್ದು, ಮಾತೃಭಾಷೆಗೆ ಧಕ್ಕೆಯುಂಟು ಮಾಡುವ ಯಾವುದೇ ನೀತಿಯನ್ನು ಸರ್ಕಾರ ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.
ಈ ವೇಳೆ ಉಪಾಧ್ಯಕ್ಷ ಆನಂದ ಗೋಡ್ಸೆ, ವಿಭಾಗ ಸಂಯೋಜಕ ಶ್ರೀರಂಗ ಪುರಾಣಿಕ, ಕಾರ್ಯದರ್ಶಿ ಸುಕಾಂತ ಕುಲಕರ್ಣಿ, ಸಹ ಕಾರ್ಯದರ್ಶಿ ಅನೀಲ ಬೆಳುಂಡಗಿ, ಭಾರತಿ ಗೋಡ್ಸೆ ಹಾಗೂ ದಾನೇಶ್ವರಿ ಅಲ್ಲಾಳೆ ಉಪಸ್ಥಿತರಿದ್ದರು.

Share this