ದೇಶೀಯ ಎಲ್‌ಪಿಜಿ ಕಾಳಸಂತೆಗೆ ಕಡಿವಾಣ: ಅಕ್ರಮ ಬಳಕೆ ತನಿಖೆಗೆ ಕೇಂದ್ರದ ಸೂಚನೆ; ಪೆಟ್ರೋಲಿಯಂ ಸಚಿವಾಲಯಕ್ಕೆ ದೂರು ರವಾನೆ

ಸಪ್ತಸಾಗರ ವಾರ್ತೆ,ನವದೆಹಲಿ, ಆ.8: ದೇಶೀಯ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಹಾಗೂ ವಾಹನಗಳಿಗೆ ಅಕ್ರಮವಾಗಿ ಬಳಸುತ್ತಿರುವುದು, ಕಾಳಸಂತೆ ನಡೆಸುತ್ತಿರುವುದು ಮತ್ತು ಇದರಿಂದ ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟಾಗುತ್ತಿರುವ ಆರೋಪಗಳ ಕುರಿತು ಕೇಂದ್ರ ಸರ್ಕಾರ ಗಂಭೀರ ಕ್ರಮಕ್ಕೆ ಮುಂದಾಗಿದೆ.
ಈ ಸಂಬಂಧ ಗ್ರಾಹಕ ದಕ್ಷತಾ ಕಲ್ಯಾಣ್ ಫೌಂಡೇಶನ್ ಸಲ್ಲಿಸಿರುವ ದೂರು ಹಾಗೂ ಪುರಾವೆಗಳನ್ನು ಪರಿಶೀಲನೆಗಾಗಿ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ರವಾನಿಸಿದೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಆರೋಪಗಳು ಸಾಬೀತಾದಲ್ಲಿ ತಪ್ಪಿತಸ್ಥರು ಹಾಗೂ ಸಂಬಂಧಪಟ್ಟ ಎಲ್‌ಪಿಜಿ ಏಜೆನ್ಸಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ಅಧೀನ ಕಾರ್ಯದರ್ಶಿ ವಿಕಾಸ್ ಕುಮಾರ್ ಅವರು ಜುಲೈ 29ರಂದು ಹೊರಡಿಸಿರುವ ಕಚೇರಿ ಜ್ಞಾಪನೆಯಲ್ಲಿ, ಈ ವಿಷಯವು ಅಗತ್ಯ ಸರಕುಗಳ ಕಾಯ್ದೆ-1955ರ ವ್ಯಾಪ್ತಿಗೆ ಒಳಪಡುವುದರಿಂದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮೂಲಕ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ವಾಹನಗಳಿಗೆ ಗೃಹಬಳಕೆ ಸಿಲಿಂಡರ್‌ನಿಂದ ಅನಿಲ?

ಫೌಂಡೇಶನ್ ತನ್ನ ದೂರಿನಲ್ಲಿ, 14.2 ಕೆಜಿ ಗೃಹಬಳಕೆಯ ಸಿಲಿಂಡರ್‌ಗಳಿಂದ ಪೈಪ್‌ಗಳ ಮೂಲಕ ವಾಹನಗಳು ಹಾಗೂ ಇತರ ವಾಣಿಜ್ಯ ಸಿಲಿಂಡರ್‌ಗಳಿಗೆ ಎಲ್‌ಪಿಜಿ ವರ್ಗಾವಣೆ ಮಾಡುವ ಅಕ್ರಮ ವ್ಯವಸ್ಥೆ ಕೆಲವು ಕಡೆ ನಡೆಯುತ್ತಿದೆ ಎಂದು ಆರೋಪಿಸಿದೆ. ಇಂತಹ ವಿಧಾನದಿಂದ ಸ್ಫೋಟ ಹಾಗೂ ಅಗ್ನಿ ಅವಘಡಗಳ ಅಪಾಯ ಹೆಚ್ಚಾಗಿದ್ದು, ಸಾರ್ವಜನಿಕರ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರದ ಬೊಕ್ಕಸಕ್ಕೂ ಹೊಡೆತ

ದೇಶೀಯ ಮತ್ತು ವಾಣಿಜ್ಯ ಎಲ್‌ಪಿಜಿಗೆ ಅನ್ವಯಿಸುವ ತೆರಿಗೆ ದರದಲ್ಲಿನ ವ್ಯತ್ಯಾಸವನ್ನು ಬಳಸಿಕೊಂಡು ಅಕ್ರಮ ವಾಣಿಜ್ಯ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಗೃಹಬಳಕೆಯ ಎಲ್‌ಪಿಜಿ ಅಕ್ರಮವಾಗಿ ವಾಣಿಜ್ಯ ಬಳಕೆಗೆ ತಿರುಗಿದರೆ ಸರ್ಕಾರಕ್ಕೆ ತೆರಿಗೆ ಆದಾಯದ ನಷ್ಟವಾಗುವ ಸಾಧ್ಯತೆಯಿದೆ ಎಂದು ಫೌಂಡೇಶನ್ ಗಮನ ಸೆಳೆದಿದೆ.

ನಕಲಿ ಬುಕಿಂಗ್ ಆರೋಪ

ಕೆಲವು ಎಲ್‌ಪಿಜಿ ವಿತರಕರು ಹಾಗೂ ಕಾಳಸಂತೆಕೋರರ ನಡುವೆ ಶಾಮೀಲಾಗಿರುವ ಆರೋಪವನ್ನೂ ಫೌಂಡೇಶನ್ ಮಾಡಿದೆ. ಗ್ರಾಹಕರಿಗೆ ತಿಳಿಯದಂತೆ ಅಥವಾ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳ ಹೆಸರಿನಲ್ಲಿ ನಕಲಿ ಬುಕಿಂಗ್ ಸೃಷ್ಟಿಸಿ ಸಿಲಿಂಡರ್‌ಗಳನ್ನು ಅಕ್ರಮವಾಗಿ ಬೇರೆಡೆಗೆ ವರ್ಗಾಯಿಸಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

159 ಜಿಲ್ಲೆಗಳ ಪುರಾವೆ

ತನ್ನ ದೂರಿನೊಂದಿಗೆ ದೇಶದ 159 ಜಿಲ್ಲೆಗಳ 59,900ಕ್ಕೂ ಅಧಿಕ ಹೋಟೆಲ್‌, ಧಾಬಾ, ಫಾಸ್ಟ್‌ಫುಡ್ ಕೇಂದ್ರ ಹಾಗೂ ರೆಸ್ಟೋರೆಂಟ್‌ಗಳ ಪಟ್ಟಿಯನ್ನು ಸಲ್ಲಿಸಿರುವುದಾಗಿ ಫೌಂಡೇಶನ್ ತಿಳಿಸಿದೆ. ಈ ಸ್ಥಳಗಳಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬುದು ತನ್ನ ಆರೋಪವಾಗಿದೆ.
ಈ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಸ್ಪಷ್ಟವಾಗಬೇಕಿದ್ದು, ಅಕ್ರಮ ಎಲ್‌ಪಿಜಿ ಬಳಕೆ, ಕಾಳಸಂತೆ ಹಾಗೂ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಫೌಂಡೇಶನ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಕೇಂದ್ರ ಸರ್ಕಾರದ ಈ ಕ್ರಮದಿಂದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದುರ್ಬಳಕೆ ಹಾಗೂ ಅಕ್ರಮ ವಾಣಿಜ್ಯ ಬಳಕೆಯ ಮೇಲೆ ಮತ್ತಷ್ಟು ನಿಗಾ ಹೆಚ್ಚುವ ಸಾಧ್ಯತೆ ಇದೆ.

Share this