ಸಪ್ತಸಾಗರ ವಾರ್ತೆ,ವಿಜಯಪುರ, ಆ.8: ಜಿಲ್ಲೆಯ ಪತ್ರಿಕಾ ಕ್ಷೇತ್ರದಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ, ಹಲವು ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡುವ ಮೂಲಕ ಉತ್ತಮ ಬರಹಗಾರರನ್ನು ರೂಪಿಸಿದ ಹಿರಿಯ ಪತ್ರಕರ್ತ ಬಾಬು ಮುರಾಳ ಅವರ ಸೇವೆ ಸಮಾಜಕ್ಕೆ ಇನ್ನಷ್ಟು ಅಗತ್ಯವಾಗಿತ್ತು ಎಂದು ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಯಡಳ್ಳಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಮುಖ್ಯರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಬಾಬು ಮುರಾಳ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ವ್ಯಕ್ತಿಯೊಬ್ಬರು ಅಗಲಿದ ಬಳಿಕ ಅವರ ವ್ಯಕ್ತಿತ್ವ ಹಾಗೂ ಸಮಾಜಕ್ಕೆ ಅವರು ನೀಡಿದ ಕೊಡುಗೆಯ ಮಹತ್ವ ಮತ್ತಷ್ಟು ಅರಿವಾಗುತ್ತದೆ. ಬಾಬು ಮುರಾಳ ಅವರು ಪತ್ರಿಕಾ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಹಾಗೂ ಅವರ ಸಾಮಾಜಿಕ ಕಾಳಜಿ ಸದಾ ಸ್ಮರಣೀಯ ಎಂದು ಹೇಳಿದರು.
ಕುಟುಂಬಕ್ಕೆ ಆರ್ಥಿಕ ನೆರವು
ಬಾಬು ಮುರಾಳ ಅವರ ಕುಟುಂಬದ ನೆರವಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಿಲ್ಲಲಿದ್ದು, ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ಅಶೋಕ ಯಡಳ್ಳಿ ಭರವಸೆ ನೀಡಿದರು. ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬದ ಸದಸ್ಯರಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರಕಾಶ ಬೆಣ್ಣೂರ ಮಾತನಾಡಿ, ಬಾಬು ಮುರಾಳ ಅವರು ಪತ್ರಕರ್ತರ ಸಂಘದ ಬೆಳವಣಿಗೆಗೆ ಶ್ರಮಿಸುವುದರ ಜತೆಗೆ ಯುವ ಪತ್ರಕರ್ತರಿಗೆ ನಿರಂತರ ಮಾರ್ಗದರ್ಶನ ನೀಡುತ್ತಿದ್ದರು. ಅನೇಕ ಯುವ ಪ್ರತಿಭೆಗಳನ್ನು ಪತ್ರಿಕಾ ಕ್ಷೇತ್ರಕ್ಕೆ ಪರಿಚಯಿಸಿ, ಉತ್ತಮ ಬರಹಗಾರರಾಗಿ ರೂಪುಗೊಳ್ಳಲು ಪ್ರೋತ್ಸಾಹ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ತಮ್ಮ ಬರಹಗಳ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ವಿಚಾರಗಳನ್ನು ಮುನ್ನೆಲೆಗೆ ತಂದು, ಸರ್ಕಾರದ ಗಮನ ಸೆಳೆಯುವಲ್ಲಿ ಮುರಾಳ ಅವರು ಪ್ರಮುಖ ಪಾತ್ರ ವಹಿಸಿದ್ದರು. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಸದಾ ಕಾಳಜಿ ಹೊಂದಿದ್ದ ಅವರ ಅಗಲಿಕೆ ಪತ್ರಿಕಾ ಕ್ಷೇತ್ರ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಷಾದಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಶಶಿಕಾಂತ ಮೆಂಡೆಗಾರ, ಬಸವರಾಜ ಉಳ್ಳಾಗಡ್ಡಿ, ಖಜಾಂಚಿ ರಾಹುಲ್ ಆಪ್ಟೆ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.


