ಸಪ್ತಸಾಗರ ವಾರ್ತೆ | ವಿಜಯಪುರ, ಆ.8:
ರೈತರ ಹಿತದೃಷ್ಟಿಯಿಂದ ಪಾರದರ್ಶಕ ವಹಿವಾಟಿಗೆ ಒತ್ತು ನೀಡಿರುವ ಆನ್‌ಲೈನ್ ಟ್ರೇಡಿಂಗ್ ಮಾರುಕಟ್ಟೆಗೆ ವಿಜಯಪುರದ ಒಣದ್ರಾಕ್ಷಿ ವಹಿವಾಟು ವೇಗವಾಗಿ ಶಿಫ್ಟ್ ಆಗುತ್ತಿದ್ದು, ಇದರ ಪರಿಣಾಮ ವಹಿವಾಟಿನ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಈವರೆಗೆ ಸರಾಸರಿ ₹5 ಕೋಟಿಯಷ್ಟಿದ್ದ ವಹಿವಾಟು ಇದೀಗ ₹12 ಕೋಟಿಗೆ ಏರಿಕೆಯಾಗಿದ್ದು, ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುವ ವಾತಾವರಣ ನಿರ್ಮಾಣವಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
ವಿಜಯಪುರದಲ್ಲಿ ಒಣದ್ರಾಕ್ಷಿ ಆನ್‌ಲೈನ್ ಟ್ರೇಡಿಂಗ್ ಮಾರುಕಟ್ಟೆ ಆರಂಭಗೊಂಡಿದ್ದರೂ, ಕೆಲವರು ಖಾಸಗಿ ಅಸೋಸಿಯೇಷನ್ ರಚಿಸಿಕೊಂಡು ಎಪಿಎಂಸಿಗೆ ಸಂಬಂಧಿಸದ ನಿಯಮಗಳನ್ನು ರೂಪಿಸಿ, ಸೀಮಿತ ಖರೀದಿದಾರರಿಗೆ ಮಾತ್ರ ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡುತ್ತಿದ್ದರು. ಇದರಿಂದ ರೈತರು ತಾವು ತಂದ ಉತ್ಪನ್ನಕ್ಕೆ ಸೂಕ್ತ ಬೆಲೆ ಪಡೆಯಲು ಸಾಧ್ಯವಾಗದೆ ನಷ್ಟ ಅನುಭವಿಸುವಂತಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಖಾಸಗಿ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಉತ್ಪನ್ನ ಸಂಗ್ರಹಿಸಿದ್ದಕ್ಕೆ ರೈತರಿಂದ ಬಾಡಿಗೆ ವಸೂಲಿ ಮಾಡುವುದರ ಜತೆಗೆ, ಮಾರಾಟದ ಬಳಿಕ ಶೇ.2ರಷ್ಟು ಕಮಿಷನ್ ಪಡೆಯಲಾಗುತ್ತಿತ್ತು. ತೂಕದಲ್ಲಿಯೂ ವ್ಯತ್ಯಾಸವಾಗುತ್ತಿದ್ದು, ಬೆಲೆ ಮತ್ತು ತೂಕ ಎರಡರಲ್ಲೂ ರೈತರಿಗೆ ನಷ್ಟವಾಗುತ್ತಿತ್ತು ಎಂದು ಯತ್ನಾಳ ಹೇಳಿದ್ದಾರೆ.
ವಾರಕ್ಕೆ ಎರಡು ಬಾರಿ ಆನ್‌ಲೈನ್ ಹರಾಜು
ಈ ಸಮಸ್ಯೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಜುಲೈ 28ರಂದು ಎಪಿಎಂಸಿ ಪ್ರಾಂಗಣದಲ್ಲಿ ದ್ರಾಕ್ಷಿ ಬೆಳೆಗಾರರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಆನ್‌ಲೈನ್ ಟ್ರೇಡಿಂಗ್ ಮಾರುಕಟ್ಟೆಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಯಿತು. ವಾರದಲ್ಲಿ ಕನಿಷ್ಠ ಎರಡು ಬಾರಿ ಆನ್‌ಲೈನ್ ಮಾರುಕಟ್ಟೆಯಲ್ಲೇ ಒಣದ್ರಾಕ್ಷಿ ವಹಿವಾಟು ನಡೆಸುವಂತೆ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು.
ಈ ನಿರ್ಧಾರದ ಬೆನ್ನಲ್ಲೇ ಆ.1ರಂದು ನಡೆದ ಆನ್‌ಲೈನ್ ಮಾರುಕಟ್ಟೆ ಪ್ರಕ್ರಿಯೆಯಲ್ಲಿ 4.59 ಲಕ್ಷ ಕೆ.ಜಿ. ಒಣದ್ರಾಕ್ಷಿ ವಹಿವಾಟು ನಡೆದಿದೆ. ಇದಕ್ಕೂ ಮೊದಲು ಕೇವಲ 2.17 ಲಕ್ಷ ಕೆ.ಜಿ. ವಹಿವಾಟು ದಾಖಲಾಗಿತ್ತು. ಒಂದೇ ಅವಧಿಯಲ್ಲಿ ವಹಿವಾಟಿನ ಪ್ರಮಾಣ ದ್ವಿಗುಣಗೊಂಡಿರುವುದು ಆನ್‌ಲೈನ್ ಮಾರುಕಟ್ಟೆಗೆ ರೈತರು ಹಾಗೂ ವರ್ತಕರಿಂದ ದೊರೆಯುತ್ತಿರುವ ಸ್ಪಂದನೆಗೆ ಸಾಕ್ಷಿಯಾಗಿದೆ.
ಕೆ.ಜಿಗೆ ₹390ರವರೆಗೆ ದರ
ವಹಿವಾಟಿನ ಪ್ರಮಾಣ ಹೆಚ್ಚಿದಂತೆ ದರದಲ್ಲಿಯೂ ಏರಿಕೆ ಕಂಡುಬಂದಿದೆ. ಒಣದ್ರಾಕ್ಷಿಗೆ ಗರಿಷ್ಠ ಕೆ.ಜಿಗೆ ₹390 ವರೆಗೆ ಬೆಲೆ ದೊರೆತಿದೆ. ಆನ್‌ಲೈನ್ ಮಾರುಕಟ್ಟೆಯಲ್ಲಿ ಭಾಗವಹಿಸುತ್ತಿದ್ದ ಖರೀದಿದಾರರ ಸಂಖ್ಯೆ 14ರಿಂದ 25ಕ್ಕೆ, ದಲ್ಲಾಳಿಗಳ ಸಂಖ್ಯೆ 5ರಿಂದ 15ಕ್ಕೆ ಏರಿಕೆಯಾಗಿದೆ.
ಹೆಚ್ಚಿನ ಖರೀದಿದಾರರು ಹರಾಜಿನಲ್ಲಿ ಭಾಗವಹಿಸುವುದರಿಂದ ಸ್ಪರ್ಧೆ ಹೆಚ್ಚಲಿದ್ದು, ರೈತರಿಗೆ ಉತ್ಪನ್ನದ ಗುಣಮಟ್ಟಕ್ಕೆ ಅನುಗುಣವಾಗಿ ಉತ್ತಮ ಬೆಲೆ ದೊರೆಯುವ ಸಾಧ್ಯತೆ ಹೆಚ್ಚಿದೆ. ಜತೆಗೆ ತೂಕದಲ್ಲಿ ಮೋಸ, ಬೆಲೆಯಲ್ಲಿ ವ್ಯತ್ಯಾಸ ಹಾಗೂ ಹರಾಜಿನ ಹೆಸರಿನಲ್ಲಿ ಉತ್ಪನ್ನದೊಂದಿಗೆ ನಡೆಯುತ್ತಿದ್ದ ಅನಗತ್ಯ ಕೈಚಳಕಕ್ಕೆ ಕಡಿವಾಣ ಬೀಳಲಿದೆ ಎಂದು ಯತ್ನಾಳ ತಿಳಿಸಿದ್ದಾರೆ.
ಸರ್ಕಾರದ ಬೊಕ್ಕಸಕ್ಕೂ ಲಾಭ
ಖಾಸಗಿಯವರು ನಡೆಸುತ್ತಿದ್ದ ಬಹಿರಂಗ ಹರಾಜುಗಳಲ್ಲಿ ದೊಡ್ಡ ಪ್ರಮಾಣದ ವಹಿವಾಟು ನಡೆಯುತ್ತಿದ್ದರೂ, ಅದರ ನಿಖರ ದಾಖಲೆಗಳು ಲಭ್ಯವಾಗುತ್ತಿರಲಿಲ್ಲ. ಪರಿಣಾಮ ಸರ್ಕಾರಕ್ಕೆ ಸೆಸ್ ಹಾಗೂ ಜಿಎಸ್‌ಟಿ ರೂಪದಲ್ಲಿ ಬರಬೇಕಿದ್ದ ಆದಾಯವೂ ಕೈತಪ್ಪುತ್ತಿತ್ತು. ಇದೀಗ ಹೆಚ್ಚಿನ ವಹಿವಾಟು ಆನ್‌ಲೈನ್ ಮಾರುಕಟ್ಟೆಯ ಮೂಲಕ ನಡೆಯುತ್ತಿರುವುದರಿಂದ ಸರ್ಕಾರದ ಆದಾಯವೂ ಹೆಚ್ಚಲಿದೆ ಎಂದು ಅವರು ಹೇಳಿದ್ದಾರೆ.
ದ್ರಾಕ್ಷಿ ಬೆಳೆಗಾರರು ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ, ಲಭ್ಯವಾಗಿರುವ ಪಾರದರ್ಶಕ ಮಾರುಕಟ್ಟೆ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ರೈತರಿಗೆ ಆನ್‌ಲೈನ್ ಮಾರುಕಟ್ಟೆಯ ಕುರಿತು ಮಾಹಿತಿ ನೀಡಿ, ಅವರು ವಹಿವಾಟಿನಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಇದರಿಂದ ರೈತರಿಗೆ ಉತ್ತಮ ದರ ದೊರೆಯುವುದರ ಜತೆಗೆ ಸರ್ಕಾರದ ಆದಾಯವೂ ಹೆಚ್ಚಲಿದೆ ಎಂದು ಯತ್ನಾಳ ಮನವಿ ಮಾಡಿದ್ದಾರೆ.
ದೇಶದ ಯಾವುದೇ ರಾಜ್ಯದ ವರ್ತಕರು ಆನ್‌ಲೈನ್ ಮಾರುಕಟ್ಟೆ ಹಾಗೂ ತಾತ್ಕಾಲಿಕವಾಗಿ ನಡೆಯುವ ಆಫ್‌ಲೈನ್ ಮಾರುಕಟ್ಟೆ ವಹಿವಾಟಿನಲ್ಲೂ ಭಾಗವಹಿಸಲು ಅವಕಾಶವಿದೆ. ಹೀಗಾಗಿ ರೈತರು ಮತ್ತು ವರ್ತಕರು ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪಾರದರ್ಶಕ ವಹಿವಾಟಿಗೆ ಉತ್ತೇಜನ ನೀಡಬೇಕು ಎಂದು ಅವರು ತಿಳಿಸಿದ್ದಾರೆ.


