ಶಿಥಿಲ ಶಾಲಾ ಕಟ್ಟಡ ಕಂಡು ಲೋಕಾಯುಕ್ತರ ಕೆಂಗಣ್ಣು!

ಪಡೇಕನೂರ ಶಾಲೆ ಅವ್ಯವಸ್ಥೆಗೆ ಅಧಿಕಾರಿಗಳಿಗೆ ನ್ಯಾಯಮೂರ್ತಿ ಬಿ.ಎಸ್. ಪಾಟೀಲ
ಖಡಕ್ ಸೂಚನೆ

ಸಪ್ತಸಾಗರ ವಾರ್ತೆ,ತಾಳಿಕೋಟೆ, ಆ.9: ತಾಲೂಕಿನ ಪಡೇಕನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಾವಸ್ಥೆ ಹಾಗೂ ಮೂಲಸೌಕರ್ಯಗಳ ಕೊರತೆ ಕಂಡು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಶಾಲಾ ಕಟ್ಟಡದ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದರು.
ಭಾನುವಾರ ಶಾಲೆಗೆ ದಿಢೀರ್ ಭೇಟಿ ನೀಡಿದ ಅವರು, ಶಾಲೆಯ ನಾಲ್ಕು ಹಳೆಯ ಕೊಠಡಿಗಳ ಮೇಲ್ಛಾವಣಿ, ನೆಲಹಾಸು ಹಾಗೂ ಕಟ್ಟಡದ ಒಟ್ಟಾರೆ ಸ್ಥಿತಿಯನ್ನು ಪರಿಶೀಲಿಸಿದರು. ಮೇಲ್ಛಾವಣಿಯ ಸಿಮೆಂಟ್ ಪದರ ಕಳಚಿ ಬೀಳುವ ಹಂತಕ್ಕೆ ತಲುಪಿರುವುದು, ನೆಲಹಾಸಿನ ಕಲ್ಲುಗಳು ಒಡೆದು ಹೋಗಿರುವುದು ಸೇರಿದಂತೆ ಕಟ್ಟಡದ ದುಸ್ಥಿತಿಯನ್ನು ಕಂಡು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳಿಗೆ ಈಗಾಗಲೇ ಬೀಗ ಹಾಕಿರುವುದನ್ನು ಗಮನಿಸಿದ ನ್ಯಾಯಮೂರ್ತಿಗಳು, ಮಕ್ಕಳ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಸೂಚಿಸಿದರು. ಹಳೆಯ ಆರ್‌ಸಿಸಿ ಮೇಲ್ಛಾವಣಿಯನ್ನು ತೆರವುಗೊಳಿಸಿ ಹೊಸ ಮೇಲ್ಛಾವಣಿ ನಿರ್ಮಿಸುವುದು, ಕೊಠಡಿಗಳ ನೆಲವನ್ನು ಸಮತಟ್ಟು ಮಾಡಿ ಟೈಲ್ಸ್ ಅಳವಡಿಸುವುದು ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಾದ ಬೆಂಚ್‌ಗಳ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ ನೀಡಿದರು.

ಒಂದೇ ಕೊಠಡಿಯಲ್ಲಿ ಎರಡು-ಮೂರು ತರಗತಿ!

ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 183 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಕೊಠಡಿಗಳ ಕೊರತೆಯಿಂದ ಒಂದೇ ಕೊಠಡಿಯಲ್ಲಿ ಎರಡು-ಮೂರು ತರಗತಿಗಳನ್ನು ನಡೆಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ನಾಲ್ಕು ಹಳೆಯ ಕಟ್ಟಡಗಳು ಶಿಥಿಲಗೊಂಡಿದ್ದು, ಮಳೆ ಬಂದಾಗ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿದೆ. ಇದರಿಂದ ಮಕ್ಕಳ ಕಲಿಕೆಗೆ ತೀವ್ರ ತೊಂದರೆಯಾಗುತ್ತಿದೆ.
ಶಾಲಾ ಆವರಣದ ಕಾಂಪೌಂಡ್ ಗೋಡೆ ತಗ್ಗಾಗಿರುವುದರಿಂದ ಹೊರಗಿನವರು ಗೋಡೆಯ ಮೇಲೆ ಕುಳಿತು ಬೀಡಿ, ಸಿಗರೇಟ್ ಸೇವನೆ ಸೇರಿದಂತೆ ಅಹಿತಕರ ಚಟುವಟಿಕೆ ನಡೆಸುತ್ತಿರುವ ಬಗ್ಗೆ ದೂರುಗಳಿರುವುದನ್ನು ಗಮನಿಸಿದ ಲೋಕಾಯುಕ್ತರು, ಕಾಂಪೌಂಡ್ ಗೋಡೆಯನ್ನು ಎತ್ತರಿಸುವಂತೆ ಸೂಚಿಸಿದರು. ಗೋಡೆಯ ಮೇಲೆ ಗ್ಲಾಸ್ ತುಂಡುಗಳು ಹಾಗೂ ಮುಳ್ಳಿನ ಬೇಲಿ ಅಳವಡಿಸುವ ಮೂಲಕ ಶಾಲಾ ಆವರಣದ ಭದ್ರತೆ ಹೆಚ್ಚಿಸುವಂತೆ ನಿರ್ದೇಶನ ನೀಡಿದರು.

ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗೂ ಆದ್ಯತೆ

ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಶಾಲಾ ಆವರಣದಲ್ಲಿ ರಂಗಮಂದಿರ ನಿರ್ಮಾಣದ ಸಾಧ್ಯತೆಯನ್ನು ಪರಿಶೀಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರ ಶಾಲೆಗಳ ಅಭಿವೃದ್ಧಿಗೆ ಒದಗಿಸುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು, ಶಿಥಿಲ ಶಾಲಾ ಕಟ್ಟಡಗಳನ್ನು ಪುನಶ್ಚೇತನಗೊಳಿಸುವ ಕೆಲಸ ನಡೆಯಬೇಕು ಎಂದು ಅವರು ಹೇಳಿದರು.
ಶಾಲೆಯ ಸಮಸ್ಯೆಗಳ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಋಷಿ ಆನಂದ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ, ಪಡೇಕನೂರ ಶಾಲೆಗೆ ತಕ್ಷಣ ಭೇಟಿ ನೀಡಿ ಕಟ್ಟಡದ ದುರಸ್ತಿ ಸೇರಿದಂತೆ ಮೂಲಸೌಕರ್ಯ ಕೊರತೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಮಂಜುನಾಥ ಗುಳೇದಗುಡ್ಡ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಬಿ. ದಮೂರ್ಮಠ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Share this