1ರಿಂದ 19 ವರ್ಷದ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆ; ಸ್ವಚ್ಛತೆಗೆ ಆದ್ಯತೆ ನೀಡಿ: ಲಕ್ಷ್ಮೀ ಮೇತ್ರಿ

ಸಪ್ತಸಾಗರ ವಾರ್ತೆ,ಇಂಡಿ, ಆ. 10: ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಜಂತುಹುಳು ಬಾಧೆ ತಡೆಗಟ್ಟಲು ಔಷಧಿ ಸೇವನೆಯ ಜೊತೆಗೆ ವೈಯಕ್ತಿಕ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದು ಸಮುದಾಯ ಆರೋಗ್ಯ ಅಧಿಕಾರಿ ಲಕ್ಷ್ಮೀ ಮೇತ್ರಿ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್ ಹಾಗೂ ಯುಬಿಎಸ್ ಶಾಲೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಶುಚಿತ್ವದ ವಾತಾವರಣ ಜಂತುಹುಳು ಬಾಧೆಗೆ ಪ್ರಮುಖ ಕಾರಣವಾಗುತ್ತದೆ. ಹೀಗಾಗಿ ಮಕ್ಕಳು ಸ್ವಚ್ಛತೆಯ ಅಭ್ಯಾಸಗಳನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದರು.
ಮಲವಿಸರ್ಜನೆಯ ನಂತರ ಹಾಗೂ ಆಹಾರ ಸೇವಿಸುವ ಮುನ್ನ ಸಾಬೂನಿನಿಂದ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಶುದ್ಧ ನೀರು ಸೇವಿಸುವುದು, ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಜಂತುಹುಳು ಬಾಧೆಯನ್ನು ಬಹುಮಟ್ಟಿಗೆ ತಡೆಗಟ್ಟಬಹುದು ಎಂದು ತಿಳಿಸಿದರು.

ರಕ್ತಹೀನತೆ, ಅಪೌಷ್ಟಿಕತೆ ತಡೆಗೆ ಮಾತ್ರೆ ಅಗತ್

ತಡವಲಗ ಸಮುದಾಯ ಆರೋಗ್ಯ ಕೇಂದ್ರದ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಆಪ್ತ ಸಮಾಲೋಚಕ ರಾಮಗೊಂಡ ಭಜಂತ್ರಿ ಮಾತನಾಡಿ, ಜಂತುಹುಳು ಬಾಧೆಯಿಂದ ಮಕ್ಕಳಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ಉಂಟಾಗುವ ಸಾಧ್ಯತೆ ಇದೆ. ಮಕ್ಕಳ ದೈಹಿಕ ಬೆಳವಣಿಗೆ ಹಾಗೂ ಆರೋಗ್ಯದ ಮೇಲೆ ಇದು ಪರಿಣಾಮ ಬೀರುವುದರಿಂದ ಪ್ರತಿ ಆರು ತಿಂಗಳಿಗೊಮ್ಮೆ ಜಂತುನಿವಾರಕ ಮಾತ್ರೆ ಸೇವಿಸುವುದು ಅಗತ್ಯ ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, “ಜಂತು ರಹಿತ ಮಗು ದೇಶದ ಸಂಪತ್ತು”. 1ರಿಂದ 19 ವರ್ಷದೊಳಗಿನ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆ ನೀಡಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಮಕ್ಕಳು ಮಾತ್ರೆ ಸೇವನೆಯಿಂದ ವಂಚಿತರಾಗದಂತೆ ಪೋಷಕರು ಹಾಗೂ ಶಿಕ್ಷಕರು ಗಮನಹರಿಸಬೇಕು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಕೆಬಿಎಸ್ ಮುಖ್ಯ ಶಿಕ್ಷಕ ಎಸ್.ಎಸ್. ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಕೆಜಿಎಸ್ ಮುಖ್ಯ ಶಿಕ್ಷಕ ಎಸ್.ಬಿ. ಕೋಳಿ, ಯುಬಿಎಸ್ ಮುಖ್ಯ ಶಿಕ್ಷಕ ಕೆ.ಐ. ಮಕಾನದಾರ, ಶಿಕ್ಷಕರಾದ ಎಸ್.ಎಸ್. ಅರಬ, ಶಿವಕಾಂತ ತಳವಾರ, ಸತೀಶ ಪಂಚಮುಖಿ, ಶಾಂತೇಶ ಹಳಗುಣಕಿ, ಆಶಾ ಕಾರ್ಯಕರ್ತೆ ಸುಜಾತಾ ಚಾಂದಕವಟೆ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share this