ಸಪ್ತಸಾಗರ ವಾರ್ತೆ,ವಿಜಯಪುರ, ಆ. 10:
ವಾಹನ ಹಾಗೂ ಜನದಟ್ಟಣೆ ನಿಯಂತ್ರಿಸುವುದು ಮತ್ತು ರೈತರು, ಖರೀದಿದಾರರು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಎನ್ಎಚ್ಎಂ ಕಟ್ಟಡದಲ್ಲಿ ನಡೆಯುತ್ತಿದ್ದ ಒಣದ್ರಾಕ್ಷಿಯ ಆಫ್ಲೈನ್ (ಬಹಿರಂಗ) ಹರಾಜು ಪ್ರಕ್ರಿಯೆಯನ್ನು ಇನ್ನು ಮುಂದೆ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗಿದೆ.
ಈ ಹಿಂದೆ ಎನ್ಎಚ್ಎಂ (ರಾಷ್ಟ್ರೀಯ ತೋಟಗಾರಿಕೆ ಮಿಷನ್) ಕಟ್ಟಡದಲ್ಲಿ ಪ್ರತಿ ಗುರುವಾರ ಒಣದ್ರಾಕ್ಷಿಯ ಆಫ್ಲೈನ್ ಹರಾಜು ನಡೆಯುತ್ತಿತ್ತು. ಇನ್ನು ಮುಂದೆ ಇದೇ ಹರಾಜು ಪ್ರಕ್ರಿಯೆ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿ ಗುರುವಾರ ನಡೆಯಲಿದೆ.
ಆನ್ಲೈನ್ ಟ್ರೇಡಿಂಗ್ಗೆ ಬದಲಾವಣೆ ಇಲ್ಲ
ಒಣದ್ರಾಕ್ಷಿಯ ಆನ್ಲೈನ್ ಇ-ಟೆಂಡರ್ ವಹಿವಾಟನ್ನು ಸ್ಥಳಾಂತರಿಸಲಾಗಿಲ್ಲ. ಪ್ರತಿ ಮಂಗಳವಾರ ಮತ್ತು ಶನಿವಾರ ನಡೆಯುವ ಆನ್ಲೈನ್ ಟ್ರೇಡಿಂಗ್ ಪ್ರಕ್ರಿಯೆ ಎಂದಿನಂತೆ ಎನ್ಎಚ್ಎಂ ಕಟ್ಟಡದಲ್ಲೇ ನಡೆಯಲಿದೆ.
ಹೀಗಾಗಿ, ಗುರುವಾರ ನಡೆಯುವ ಬಹಿರಂಗ ಹರಾಜು — ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ; ಮಂಗಳವಾರ ಮತ್ತು ಶನಿವಾರ ನಡೆಯುವ ಆನ್ಲೈನ್ ಟ್ರೇಡಿಂಗ್ — ಎನ್ಎಚ್ಎಂ ಕಟ್ಟಡದಲ್ಲಿ ನಡೆಯಲಿದೆ ಎಂದು ಎಪಿಎಂಸಿ ಸ್ಪಷ್ಟಪಡಿಸಿದೆ.
ರೈತರು ತಮ್ಮ ಒಣದ್ರಾಕ್ಷಿ ಬೆಳೆಗೆ ಸ್ಪರ್ಧಾತ್ಮಕ ಹಾಗೂ ಉತ್ತಮ ಬೆಲೆ ಪಡೆಯಲು ಅನುಕೂಲವಾಗುವಂತೆ ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಅಧಿಕೃತ ಪರವಾನಗಿ ಹೊಂದಿರುವ ಎಲ್ಲ ಖರೀದಿದಾರರು ಹಾಗೂ ರೈತರು ನೂತನ ವ್ಯವಸ್ಥೆಯ ಸದುಪಯೋಗ ಪಡೆದುಕೊಂಡು ಹರಾಜು ಮತ್ತು ವ್ಯಾಪಾರ ವಹಿವಾಟಿನಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ವಿಜಯಪುರ ಎಪಿಎಂಸಿ ಪ್ರಕಟಣೆ ತಿಳಿಸಿದೆ.


