ಶ್ರೀಶೈಲ ಭಕ್ತರಿಗೆ ಸಿಹಿಸುದ್ದಿ: ವಿಜಯಪುರದಿಂದ ನಾನ್‌-ಎಸಿ ಸ್ಲೀಪರ್‌ ಬಸ್‌ ಸೇವೆ

ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಪ್ರತಿದಿನ ವಿಶೇಷ ಬಸ್‌ ಸಂಚಾರ | ಗುಂಪು ಪ್ರಯಾಣಕ್ಕೂ ಕರಾರು ಆಧಾರದಲ್ಲಿ ಬಸ್‌ ಸೌಲಭ್

ಸಪ್ತಸಾಗರ ವಾರ್ತೆ,ವಿಜಯಪುರ, ಆ.10:
ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಶ್ರೀಶೈಲಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಜಯಪುರದಿಂದ ಶ್ರೀಶೈಲಕ್ಕೆ ವಿಶೇಷ ನಾನ್‌-ಎಸಿ ಸ್ಲೀಪರ್‌ ಬಸ್‌ ಸೇವೆಯನ್ನು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಆರಂಭಿಸಿದೆ.
ವಿಜಯಪುರದಿಂದ ಬಸವನಬಾಗೇವಾಡಿ, ತಾಳಿಕೋಟಿ, ರಾಯಚೂರು ಹಾಗೂ ಕರ್ನೂಲ್‌ ಮಾರ್ಗವಾಗಿ ಶ್ರೀಶೈಲಕ್ಕೆ ‘ಅಮೋಘ ವರ್ಷ’ ನಾನ್‌-ಎಸಿ ಸ್ಲೀಪರ್‌ ಬಸ್‌ ಕಾರ್ಯಾಚರಣೆ ಮಾಡಲಿದೆ.
ಈ ಬಸ್‌ ಪ್ರತಿದಿನ ಸಂಜೆ 6 ಗಂಟೆಗೆ ವಿಜಯಪುರದಿಂದ ಹೊರಟು, ಮರುದಿನ ಬೆಳಿಗ್ಗೆ 6 ಗಂಟೆಗೆ ಶ್ರೀಶೈಲ ತಲುಪಲಿದೆ. ಶ್ರೀಶೈಲದಿಂದ ಪ್ರತಿದಿನ ಸಂಜೆ 5.30ಕ್ಕೆ ಹೊರಟು, ಮರುದಿನ ಬೆಳಿಗ್ಗೆ 5.30ಕ್ಕೆ ವಿಜಯಪುರ ತಲುಪಲಿದೆ.
ಭಕ್ತಾದಿಗಳ ಬೇಡಿಕೆ ಹಾಗೂ ಜನದಟ್ಟಣೆಗೆ ಅನುಗುಣವಾಗಿ ವಿಜಯಪುರದೊಂದಿಗೆ ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟಿ ಹಾಗೂ ಬಸವನಬಾಗೇವಾಡಿ ಬಸ್‌ ನಿಲ್ದಾಣಗಳಿಂದಲೂ ಶ್ರೀಶೈಲಕ್ಕೆ ಹೆಚ್ಚುವರಿ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗಳನ್ನು ಕಾರ್ಯಾಚರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಅದೇ ರೀತಿ, ಒಂದೇ ಗುಂಪಿನಲ್ಲಿ ಶ್ರೀಶೈಲಕ್ಕೆ ಪ್ರಯಾಣಿಸಲು ಬಯಸುವ ಭಕ್ತಾದಿಗಳಿಗಾಗಿ ಅವರ ವಾಸಸ್ಥಳದಿಂದಲೇ ಕರಾರು ಒಪ್ಪಂದದ ಆಧಾರದ ಮೇಲೆ ವಿಶೇಷ ಬಸ್‌ಗಳನ್ನು ಒದಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಆನ್‌ಲೈನ್‌ ಟಿಕೆಟ್‌ ಕಾಯ್ದಿರಿಸಲು ಅವಕಾಶ

ಪ್ರಯಾಣಿಕರು ಆನ್‌ಲೈನ್‌ ಮೂಲಕ ಟಿಕೆಟ್‌ ಕಾಯ್ದಿರಿಸಿಕೊಳ್ಳಬಹುದಾಗಿದೆ. ವಿಜಯಪುರದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಕೇಂದ್ರ ಬಸ್‌ ನಿಲ್ದಾಣ, ಸಿಂದಗಿ ಹಾಗೂ ಮುದ್ದೇಬಿಹಾಳ ಬಸ್‌ ನಿಲ್ದಾಣಗಳಲ್ಲಿರುವ ಮುಂಗಡ ಟಿಕೆಟ್‌ ಕಾಯ್ದಿರಿಸುವ ಕೌಂಟರ್‌ಗಳಲ್ಲಿಯೂ ಟಿಕೆಟ್‌ ಬುಕ್‌ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಬಸ್‌ ಘಟಕ ಅಥವಾ ಬಸ್‌ ನಿಲ್ದಾಣಾಧಿಕಾರಿಗಳನ್ನು ಸಂಪರ್ಕಿಸಬಹುದು.
ಸಂಪರ್ಕ: 7760992270 / 7760992208
ಈ ಕುರಿತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ ಪ್ರಕಟಣೆ ತಿಳಿಸಿದೆ.

Share this