ರೂ.5.43 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಯತ್ನಾಳ ಭೂಮಿಪೂಜೆ : ರಸ್ತೆ, ಚರಂಡಿ ಅಭಿವೃದ್ಧಿಗೆ ಆದ್ಯತೆ; ಸ್ಥಳೀಯರ ಅಹವಾಲು ಆಲಿಸಿದ ಶಾಸಕ

ಸಪ್ತಸಾಗರ ವಾರ್ತೆ,ವಿಜಯಪುರ, ಆ.11:
ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ 2ನೇ ಹಂತದಲ್ಲಿ ಮಂಜೂರಾದ ರೂ.5.43 ಕೋಟಿ ಅನುದಾನದಲ್ಲಿ ನಗರದ ವಿವಿಧ ವಾರ್ಡ್‌ಗಳಲ್ಲಿ ರಸ್ತೆ, ಒಳಚರಂಡಿ ಹಾಗೂ ಉದ್ಯಾನವನ ಅಭಿವೃದ್ಧಿ ಕಾಮಗಾರಿಗಳಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೋಮವಾರ ಭೂಮಿಪೂಜೆ ನೆರವೇರಿಸಿದರು. ವಿವಿಧ ಕಾಮಗಾರಿ ಸ್ಥಳಗಳಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುವ ಭರವಸೆ ನೀಡಿದರು.
ವಾರ್ಡ್‌ ನಂ.2ರ ಅಪ್ಜಲಪುರ ಟಕ್ಕೆಯಲ್ಲಿ ರೂ.2 ಕೋಟಿ ವೆಚ್ಚದಲ್ಲಿ ಒಳಚರಂಡಿ ಹಾಗೂ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ, ಕಂಜರ ಬಾಟರ ಓಣಿಯಲ್ಲಿ ರೂ.52 ಲಕ್ಷ ವೆಚ್ಚದಲ್ಲಿ ಒಳಚರಂಡಿ ಮತ್ತು ಸಿಸಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಲಾಯಿತು.
ವಾರ್ಡ್‌ ನಂ.6ರ ಮಾನಸ ರೆಸಿಡೆನ್ಸಿಯಲ್ಲಿ ರೂ.1 ಕೋಟಿ ಅನುದಾನದಲ್ಲಿ ಒಳಚರಂಡಿ ಹಾಗೂ ಆಂತರಿಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ವಾರ್ಡ್‌ ನಂ.22ರ ಜಲನಗರದ ಸಂತೋಷಿ ಮಾತಾ ದೇವಸ್ಥಾನ ರಸ್ತೆಯಲ್ಲಿ ರೂ.1.10 ಕೋಟಿ ವೆಚ್ಚದಲ್ಲಿ ಒಳಚರಂಡಿ ಮತ್ತು ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೂ, ಗಿರೀಶ ಬಡಾವಣೆಯಲ್ಲಿ ರೂ.90 ಲಕ್ಷ ವೆಚ್ಚದಲ್ಲಿ ಒಳಚರಂಡಿ ಹಾಗೂ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಭೂಮಿಪೂಜೆ ನೆರವೇರಿಸಿದರು.
ವಾರ್ಡ್‌ ನಂ.29ರ ವಜ್ರಹನುಮಾನ ನಗರದ ಪಿಡಿಜೆ ಲೇಔಟ್‌ನ ಕೃಷ್ಣ ಬಡಾವಣೆಯಲ್ಲಿ ರೂ.43 ಲಕ್ಷ ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿಪಡಿಸುವ ಕಾಮಗಾರಿಗೂ ಶಾಸಕರು ಭೂಮಿಪೂಜೆ ನೆರವೇರಿಸಿದರು.
ಇದೇ ವೇಳೆ ವಾರ್ಡ್‌ ನಂ.22ರಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಿಂದ ದೇವರಾಜ ಅರಸು ವೃತ್ತದ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದವರೆಗೆ ನೂತನವಾಗಿ ಅಳವಡಿಸಿರುವ ಅಲಂಕಾರಿಕ ಬೀದಿ ದೀಪಗಳನ್ನು ಯತ್ನಾಳ ಲೋಕಾರ್ಪಣೆಗೊಳಿಸಿದರು.
ಪ್ರತಿ ಕಾಮಗಾರಿ ಸ್ಥಳದಲ್ಲೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಸ್ಥಳೀಯ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು.
ಮಹಾನಗರ ಪಾಲಿಕೆ ಮೇಯರ್ ಎಂ.ಎಸ್. ಕರಡಿ, ಉಪಮೇಯರ್ ಸುನೀತಾ ಜಾಧವ, ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಮಳುಗೌಡ ಪಾಟೀಲ, ಪ್ರೇಮಾನಂದ ಬಿರಾದಾರ, ಗಿರೀಶ ಪಾಟೀಲ, ಅಲ್ತಾಫ್ ಇಟಗಿ, ಮುಖಂಡರಾದ ಪಾಂಡುಸಾಹುಕಾರ ದೊಡ್ಡಮನಿ, ಚಂದ್ರಶೇಖರ ಚೌದ್ರಿ, ರಾಜಶೇಖರ ಭಜಂತ್ರಿ, ಯೋಗೀಶ ನಡುವಿನಕೇರಿ ಸೇರಿದಂತೆ ಮುಖಂಡರು, ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

Share this