ರೂ.79.95 ಕೋಟಿ ಲಾಭ: ವಿಜಯಪುರ ವಿಭಾಗಕ್ಕೆ ರಾಜ್ಯಮಟ್ಟದ ಪ್ರಶಂಸೆ, ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸನ್ಮಾನ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 11:
ಏಪ್ರಿಲ್ 2025ರಿಂದ ಮಾರ್ಚ್ 2026ರವರೆಗಿನ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗವು ಆರ್ಥಿಕ ಹಾಗೂ ಭೌತಿಕ ಪ್ರಗತಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಒಟ್ಟು ರೂ.79.95 ಕೋಟಿ ಲಾಭ ಗಳಿಸಿದೆ.
ಅಲ್ಲದೆ, ರಾಜ್ಯದಲ್ಲಿಯೇ ಅತಿ ಹೆಚ್ಚು ಶಕ್ತಿ ಯೋಜನೆ ಆದಾಯ ಗಳಿಸಿ, ಯೋಜನೆಯನ್ನು ಉತ್ತಮವಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ ವಿಜಯಪುರ ವಿಭಾಗದ ವಿಜಯಪುರ ಘಟಕ-1, ವಿಜಯಪುರ ಘಟಕ-2, ತಾಳಿಕೋಟೆ ಹಾಗೂ ಮುದ್ದೇಬಿಹಾಳ ಘಟಕಗಳ ವ್ಯವಸ್ಥಾಪಕರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.
ವಿಭಾಗದ ಹಿಂದಿನ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಹಾಗೂ ಪ್ರಸ್ತುತ ನಿವೃತ್ತರಾಗಿರುವ ನಾರಾಯಣಪ್ಪ ಕುರುಬರ ಅವರಿಗೂ ನಗದು ಬಹುಮಾನದ ಚೆಕ್ ಹಾಗೂ ಪ್ರಶಂಸನಾ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.
ಇದೇ ವೇಳೆ ವಿಜಯಪುರ ಘಟಕ-1ರ ವ್ಯವಸ್ಥಾಪಕ ಸಂಗನಗೌಡ ಬಿರಾದಾರ, ವಿಜಯಪುರ ಘಟಕ-2ರ ವ್ಯವಸ್ಥಾಪಕ ಆನಂದ ಹೂಗಾರ, ಮುದ್ದೇಬಿಹಾಳ ಘಟಕದ ವ್ಯವಸ್ಥಾಪಕ ಅಶೋಕ ಬೋವಿ ಹಾಗೂ ತಾಳಿಕೋಟೆ ಘಟಕದ ವ್ಯವಸ್ಥಾಪಕ ಪುಂಡಲೀಕ ಜಾಧವ್ ಅವರಿಗೂ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪುರ ವಿಭಾಗದ ಹಿಂದಿನ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಚಾಲನಾ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ ಸೇರಿದಂತೆ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಉತ್ತಮ ಕರ್ತವ್ಯ ನಿರ್ವಹಣೆಯಿಂದ ಈ ಸಾಧನೆ ಸಾಧ್ಯವಾಗಿದೆ. ವಿಭಾಗದ ಕಾರ್ಮಿಕ ಮುಖಂಡರು ಆಡಳಿತದೊಂದಿಗೆ ಕೈಜೋಡಿಸಿ ಸಹಕಾರ ನೀಡಿದ್ದರಿಂದ ವಿಭಾಗ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು ಎಂದು ಹೇಳಿದರು.
ತಮ್ಮ ಸೇವಾ ಅವಧಿಯಲ್ಲಿ ಉತ್ತಮ ಸಲಹೆ, ಸೂಚನೆ ಹಾಗೂ ಸಹಕಾರ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ್ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಮಾಜಿ ಸಚಿವ ಶಿವಾನಂದ ಪಾಟೀಲ ಹಾಗೂ ಜಿಲ್ಲೆಯ ಎಲ್ಲ ಶಾಸಕರಿಗೆ ಅವರು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.
ಸಮಾರಂಭದಲ್ಲಿ ವಿಭಾಗದ ಸಾರಿಗೆ ಅಧಿಕಾರಿ ಎಂ.ಎಸ್. ಹಿರೇಮಠ, ಕೇಂದ್ರ ಬಸ್ ನಿಲ್ದಾಣದ ವ್ಯವಸ್ಥಾಪಕ ಜೆ.ಕೆ. ಹುಗ್ಗಣನವರ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Share this